ನವದೆಹಲಿ : ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ನೂತನ ರಾಮ ಮಂದಿರವು ದೇಶದ ಮತ್ತು ಜಗತ್ತಿಗೆ ಶ್ರೇಷ್ಠ ಮಾನವೀಯತೆಯ ಪ್ರತೀಕವಾಗಿರಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಆಶಿಸಿದ್ದಾರೆ
ಶನಿವಾರ ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡ ‘ಲಕ್ಷಾಂತರ ಜನರಿಗೆ ಸಂತೋಷ ಕ್ಷಣವಾಗಿದ್ದ ರಾಮ ಮಂದಿರದ ಪ್ರಾಣಪ್ರತಿಷ್ಠಾಪನಾ ಸಮಾರಂಭದ ನೇತೃತ್ವ ವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಮೋದಿ 11 ದಿನ ಉಪವಾಸ ಆಚರಿಸಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು.
ರಾಮನು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇದ್ದಾನೆ ಶ್ರೀರಾಮನು ಪ್ರೀತಿ ಮತ್ತು ದಯೆಯ ಸಂಕೇತವಾಗಿದ್ದನು. ಅವನು, ಧರ್ಮ ಮತ್ತು ರಾಜಧರ್ಮವನ್ನು ಅನುಸರಿಸಿ ದನು ಎಂದು ನಮ್ಮ ಪೂರ್ವಜರು ನಮಗೆ ರಾಮನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.
ಅಲ್ಲದೇ ‘ಶ್ರೀರಾಮನ ಆದರ್ಶಗಳೇ ಮಹಾತ್ಮ ಗಾಂಧೀಜಿಯನ್ನು ಸೆಳೆದವು. ರಾಮನನ್ನು ನಮ್ಮ ರಾಷ್ಟ್ರದ ಸದ್ಗುಣಗಳ ಸಂಕೇತವನ್ನಾಗಿ ಮಾಡಿದ್ದು ಗಾಂಧೀಜಿ. ರಾಮ ನೀಡಿದ ನೈತಿಕ ಶಕ್ತಿಯಿಂದಲೇ ನಾವು ಬ್ರಿಟೀಷರ ವಿರುದ್ಧ ಹೋರಾಡಿದೆವು. ರಾಮಮಂದಿರ ಮಾನವೀಯತೆಯ ಸಂಕೇತವಾಗಲಿ ಎಂದು ಆಶಿಸುತ್ತೇನೆ’ ಎಂದರು.
ಇದೇ ವೇಳೆ ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಎಮ್.ಎಸ್ ಸ್ವಾಮಿನಾಥನ್ ಮೂವರು ಮಹಾಪುರುಷರಿಗೆ ಭಾರತ ರತ್ನ ಗೌರವ ನೀಡಿದ್ದನ್ನು ಶ್ಲಾಘಿಸಿದರು .