8.00 ಗಂಟೆಗೆ ಮತ ಎಣಿಕೆ ಆರಂಭ ಮಧ್ಯಾಹ್ನ 12.00 ರವೇಳೆಗೆ ಚಿತ್ರಣ ,ಸಂಜೆ ಸ್ಪಷ್ಟ ಫಲಿತಾಂಶ
ಉಡುಪಿ : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಮಂಗಳವಾರ ನಗರದ ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯಲಿದೆ. ಎಣಿಕೆ ಎಲ್ಲ ರೀತಿಯಲ್ಲಿ ನಿರ್ವಿಘ್ನ ಮತ್ತು ಪಾರದರ್ಶಕವಾಗಿ ನಡೆಸುವುದಕ್ಕೆ ಜಿಲ್ಲಾಡಳಿತದ ಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಆರಂಭದಲ್ಲಿ ಈ ಬಾರಿ ಚಲಾವಣೆಯಾಗಿರುವ 7853 ಅಂಚೆ ಮತಗಳು ಮತ್ತು 264 ಸೇವಾ ಮತಗಳ ಎಣಿಕೆ ನಡೆಯಲಿದೆ
ನಂತರ ಉಡುಪಿ ಜಿಲ್ಲೆಯ 4 ಮತ್ತು ಚಿಕ್ಕಮಗಳೂರಿನ 4 ವಿಧಾನ ಸಭಾ ಕ್ಷೇತ್ರವಾರು ಮತಎಣಿಕೆ ನಡೆಯಲಿದೆ. ಕುಂದಾಪುರ, ಕಾರ್ಕಳ, ಶೃಂಗೇರಿ, ತರಿಕೆರೆ ಕ್ಷೇತ್ರಗಳಿಗೆ ತಲಾ 2ರಂತೆ 8 ಮತ್ತು ಉಳಿದ ಕ್ಷೇತ್ರಗಳಿಗೆ ತಲಾ 1ರಂತೆ 4 ಸೇರಿ ಒಟ್ಟು 12 ಕೊಠಡಿಗಳಲ್ಲಿ 112 ಟೇಬಲ್ ಗಳಲ್ಲಿ ಮತಎಣಿಕೆ ನಡೆಯಲಿದೆ. ಕ್ಷೇತ್ರವಾರು ಕನಿಷ್ಠ 15 ಮತ್ತು ಗರಿಷ್ಟ 19ರಂತೆ ಒಟ್ಟು 135 ಸುತ್ತುಗಳಲ್ಲಿ ಒಟ್ಟು 12,31005 ಎಣಿಕೆ ಮುಗಿಯಲಿದೆ.
ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸ್ ಇಲಾಖೆ ಕೂಡ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ ಎಣಿಕಾ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ 3 ಸುತ್ತುಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ.