ಕೋಟ : ಒಂದು ಸುಂದರ ಕಟ್ಟಡ ಗಟ್ಟಿಯಾಗಿ ಇರಬೇಕು ಎಂದಾದರೆ ಅದರ ಪಂಚಾಂಗ ಸುಭದ್ರವಾಗಿ ಇರಬೇಕು .ಅದೇ ರೀತಿ ಮನುಷ್ಯನ ಜೀವನ ಯಶಸ್ವಿ ಆಗಬೇಕಾದರೆ ಜೀವನದ ಪಂಚಾಂಗ ಅಂದರೆ ವಿದ್ಯಾರ್ಥಿ ಜೀವನ ಸುಭದ್ರವಾಗಿರಬೇಕು. ಆದುದರಿಂದ ಶಾಲಾ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಹೆಚ್ಚು ಗಮನಹರಿಸಬೇಕು ಎಂದು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ ಶರ್ಮ ಹೇಳಿದರು.
ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ನೀಡಲಾದ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಗಣೇಶ್ ಜಿ , ಕೃಷ್ಣ ಆಚಾರ್, ಲೀಲಾವತಿ ಗಂಗಾಧರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಕುಸುಮ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.