ಕುಂದಾಪುರ ಸಾಹಿತ್ಯ ಸಮ್ಮೇಳನ
ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು 18ನೇ ಸಾಹಿತ್ಯ ಸಮ್ಮೇಳನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಫೆ.19ರಂದು ನಡೆಯಲಿದೆ.
ಬೆಳಿಗ್ಗೆ 8 ಗಂಟೆಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ರಾಷ್ಟ್ರ ಧ್ವಜಾರೋಹಣವನ್ನು ಮತ್ತು ಕಸಾಪ ಕುಂದಾಪುರ ಘಟಕದ ಅಧ್ಯಕ್ಷ ಡಾ.ಉಮೇಶ ಪುತ್ರನ್ ಪರಿಷತ್ ಧ್ವಜಾರೋಹಣ ಮಾಡಲಿದ್ದಾರೆ. 8.30ಕ್ಕೆ ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತ್ ಅವರನ್ನು ಸ್ವಾಗತಿಸಿಕೊಂಡ ಬಳಿಕ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಲಿದೆ. ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ ಯು.ಕೆ. ಸಮ್ಮೇಳನ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
10 ಗಂಟೆಗೆ ಬೆಂಗಳೂರಿನ ಹೊಟೇಲ್ ಉದ್ಯಮಿ ಜಗನ್ನಾಥ ವಿ.ಪೈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಸಾಹಿತಿ, ಅಂಕಣಕಾರ ಕೋ.ಶಿವಾನಂದ ಕಾರಂತ್ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪುಸ್ತಕ ಬಿಡುಗಡೆ ಹಾಗೂ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪಾರ್ವತಿ ಜಿ.ಐತಾಳ್, ಸಾಹಿತಿ ಬೆಳಗೋಡು ರಮೇಶ ಭಟ್ ಮೊದಲಾವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.