ನಿಗಮಕ್ಕೆ ಅನುದಾನ ಬಿಡುಗಡೆಗೊಳಿಸಿ: ಸತ್ಯಜಿತ್ ಸುರತ್ಕಲ್
ಮಂಗಳೂರು: ರಾಜ್ಯ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿರುವುದು ಅಭಿನಂದನೀಯ. ಆದರೆ, ಚುನಾವಣೆ ಹೊಸ್ತಿಲಲ್ಲಿ ನಿಗಮ ಘೋಷಣೆ ಮಾಡಿರುವುದರಿಂದ ಬಿಲ್ಲವ, ಈಡಿಗ ಸಮುದಾಯಕ್ಕೆ ಯಾವುದೇ ಪ್ರಯೋಜನ ಇಲ್ಲ. ನಿಗಮಕ್ಕೆ ತಕ್ಷಣ ಅಧ್ಯಕ್ಷರು, ಸದಸ್ಯರನ್ನು ನೇಮಕಗೊಳಿಸಿ 500ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು. ರಾಜ್ಯ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಸಮಾಜಕ್ಕೆ ಒಂದು ಹಂತದ ಗೆಲುವು ಸಿಕ್ಕಿದ್ದು, ನಿಗಮಕ್ಕೆ ಸದಸ್ಯರ ನೇಮಕ, ಕನಿಷ್ಠ 500 ಕೋಟಿ ರೂ. ಅನುದಾನ ಘೊಷಣೆ ಮಾಡುವತನಕ ನಮ್ಮ ಹೋರಾಟದಿಂದ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಮಂಗಳವಾರ ಸುದ್ದಗೋಷ್ಠಿಯಲ್ಲಿ ಅವರು ಹೇಳಿದರು.
ನಿಗಮ ಘೋಷಣೆಯಾದ ಕಾರಣ ಬಿಲ್ಲವರು ಇನ್ನು ದೇವರಾಜ ಅರಸು ನಿಗಮದಿಂದ ಅನುದಾನ ಪಡೆಯುವಂತಿಲ್ಲ. ಬಜೆಟ್ ಏಪ್ರಿಲ್‍ನಿಂದ ಜಾರಿಗೆ ಬರಲಿದ್ದು, ಮಾರ್ಚ್ ಅಂತ್ಯಕ್ಕೆ ನೀತಿ ಸಂಹಿತೆ ಜಾರಿ ಸಾಧ್ಯತೆಯಿರುವುದರಿಂದ ಇನ್ನೇನಿದ್ದರೂ ಹೊಸ ಸರಕಾರ ಬಂದ ಬಳಿಕವೇ ನಿಗಮ ಅನುಷ್ಠಾನಕ್ಕೆ ಬರಲಿದೆ. ಆದುದರಿಂದ ಸಮಾಜ ಈಗಲೇ ಸಂಭ್ರಮಿಸುವ ಅಗತ್ಯವಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಿಂಜ, ಕುದ್ರೋಳಿ ಶ್ರೀ ಗೋಕಾರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾದ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.