ಕುಂದಾಪುರ : ಧರ್ಮದ ಮತ್ತು ಧಾರ್ಮಿಕ ಜೀವನದ ಪ್ರಾಮುಖ್ಯತೆಯನ್ನು ಭಗವಂತನು ಶ್ರೀರಾಮನ ಅವತಾರದಲ್ಲಿ ಉಪದೇಶ ಮಾಡಿದ್ದಾನೆ. ಭಗವಂತನ ಒಂದೊಂದು ಅವತಾರಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಈ ಎಲ್ಲಾ ಅವತಾರಗಳ ಮೂಲ ಉದ್ದೇಶ ಧರ್ಮೋದ್ಧಾರ ಹಾಗೂ ಧರ್ಮದ ರಕ್ಷಣೆ. ಪ್ರತಿಯೊಂದು ಯುಗದಲ್ಲೂ ಧರ್ಮ ಸಂಸ್ಥಾಪನೆಗೆ ಭಗವಂತನು ವಿಶೇಷ ಅವತಾರ ತಾಳಿ ಧರ್ಮ ಸಂರಕ್ಷಣೆ ಮಾಡಿದ್ದಾನೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದರು
ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರ ಮಂಟಪ ಹಾಗೂ ಶ್ರೀ ದೇವರ ಗರ್ಭಗುಡಿಯ ರಜತ ಕವಚ ಉದ್ಘಾಟಿಸಿ, ಆಶೀರ್ವಚನ ನೀಡಿ ಅವರು ಮಾತನಾಡಿದರು
ಪರಂಪರೆಯಾಗಿ ಬಂದಂತಹ ನಮ್ಮ ಧರ್ಮವನ್ನು ಆಚರಣೆ ಮಾಡಿ ನಮ್ಮ ಮಕ್ಕಳಿಗೆ ಧರ್ಮವನ್ನು ಉಪದೇಶ ಮಾಡಿ ಒಳ್ಳೆಯದು ಮಾಡಬೇಕು. ನಮ್ಮ ಸನಾತನ ಹಿಂದು ಧರ್ಮ ಸಂರಕ್ಷಣೆ ಮಾಡಿಕೊಳ್ಳುವುದು ಆಚರಣೆ ಮಾಡುವುದು ನಮ್ಮ ಕರ್ತವ್ಯ. ನಾವು ಒಳ್ಳೆಯ ಕೆಲಸವನ್ನು ಮಾಡಬೇಕು, ಧರ್ಮ ಮಾರ್ಗದಲ್ಲಿ ನಡೆಯಬೇಕು. ಪರಿಸ್ಥಿತಿಗನುಗುಣವಾಗಿ ಅದಕ್ಕೆ ತಕ್ಕಂತೆ ನಮ್ಮನ್ನು ನಾವು ತಯಾರು ಮಾಡಿಕೊಂಡು ನಮ್ಮ ಧರ್ಮ ಉದ್ಧಾರ, ಆಚರಣೆ ಮಾಡಿ ಸಂರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಅವರು ನುಡಿದರು
ಕೋಶಾಧಿಕಾರಿ ಡಿ. ಸತೀಶ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಾಗರಾಜ ನಾಯ್ಕ್ ವಂದಿಸಿದರು.