ಉಡುಪಿ : ನನ್ನ ಅಮ್ಮನ 40 ವರ್ಷದ ಕನಸನ್ನು ನೆರವೇರಿಸಿದ ಸಂತೃಪ್ತಿಯಾಗುತ್ತಿದೆ. ಹುಟ್ಟೂರಾದ ಕುಂದಾಪುರಕ್ಕೆ ನನ್ನನ್ನು ಕರೆದುಕೊಂಡು ಬಂದು ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿಸುವುದು ನನ್ನಮ್ಮನ ಕನಸಾಗಿತ್ತು. ಅವರ ಜನ್ಮದಿನವಾದ ಸೆ.2 ರ ಮೊದಲು ಅವರಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಕೊಡಲು ಏನು ಸಾಧ್ಯ?….ಹೀಗೆಂದು ಬರೆದುಕೊಂಡವರು ತೆಲುಗು ಸಿನೆಮಾ ಇಂಡಸ್ಟ್ರಿ ಖ್ಯಾತ ನಟ ಜೂ.ಎನ್.ಟಿ.ಆರ್
ಹೌದು, ವಯಸ್ಸಾದ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುವ ಮಕ್ಕಳಿರುವ ಈ ಯುಗದಲ್ಲಿ ನಟರೊಬ್ಬರು ತನ್ನ ತಾಯಿ ಯ ಕನಸನ್ನು ಈಡೇರಿಸಲು ಉಡುಪಿ ಆಗಮಿಸಿರುವುದು ಮಾದರಿಯಾಗಿದೆ. ಯುವಜನತೆಗೆ ಶನಿವಾರ ಶ್ರೀಕೃಷ್ಣಮಠಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ದ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಶನಿವಾರ ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.ತಮ್ಮ ತಾಯಿ ಶಾಲಿನಿ ನಂದಾಮುರಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದ ಅವರು ಪರ್ಯಾಯ ಪುತ್ತಿಗೆ ಮಠಾಧಿ ಶರಾದ ಶ್ರೀ ಸುಗುಣೇಂದ್ರತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು
ಶ್ರೀ ಮಠದ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು 40 ವರ್ಷದಿಂದ ನನ್ನ ಅಮ್ಮನ ಆಸೆ ಇದಾಗಿತ್ತು. ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದರು.ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದವರು ನುಡಿದರು ಅವರೊಂದಿಗೆ ನಟ ರಿಷಭ್ ಶೆಟ್ಟಿ ಉಪಸ್ಥಿತರಿದ್ದರು