ಉಡುಪಿ : ಜಿಲ್ಲೆಯಾದ್ಯಂತ ದೀಪಾವಳಿಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಜನತೆ ಪಟಾಕಿ ಸಿಡಿಸಿ, ಹೊಸ ಬಟ್ಟೆ ತೊಟ್ಟು ಸಿಹಿ ಉಂಡರು. ಕಳೆದ ರಾತ್ರಿ ಜಲಪೂರಣದೊಂದಿಗೆ ಆರಂಭವಾದ ದೀಪಾವಳಿ, ನರಕ ಚತುರ್ದಶಿಯಂದು ಪ್ರಾತಃ ಕಾಲ ತೈಲಾಭ್ಯಂಗ ನಡೆಸಲಾಯಿತು. ಶುಕ್ರವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ ಆಚರಿಸ ಲಾಯಿತು. ಶನಿವಾರ ಗೋಪೂಜೆ ನಡೆಯಲಿದೆ
ಉಡುಪಿ ಶ್ರೀಕೃಷ್ಣಮಠದಲ್ಲಿ
ಉಡುಪಿ ಶ್ರೀಕೃಷ್ಣಮಠದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರ ಮಾಡಲಾಯಿತು. ಜಲಪೂರಣಶಾಸ್ತ್ರದ ಅಂಗವಾಗಿ ಮಠದ ಪುರೋಹಿತ ರಾಘವೇಂದ್ರ ಕೊಂಡಂಚ ಕಲಶ ಪೂಜೆ ಮಾಡಿದರು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ನಡೆಸಲಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ ಕೃಷ್ಣಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆಶಾಸ್ತ್ರ ನಡೆಸಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರ ಮಾಡಲಾಯಿತು. ಬಳಿಕ ಅಭ್ಯಂಗ ಸ್ನಾನ ನಡೆಯಿತು. ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.