ಕೋಟ : ಸಮಾನ ಮನಸ್ಕರ ತಂಡದ ವತಿಯಿಂದ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಎ.02 ಹಾಗೂ 03 ರಂದು ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಲು ಸಾರ್ವಜನಿಕ ಸಭೆ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು. ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ವಿದ್ವಾನ್ ಡಾ.ವಿಜಯ ಮಂಜರ್ ಅವರು ಶ್ರೀನಿವಾಸ ಕಲ್ಯಾಣದ ಆಯೋಜನೆ ಹಾಗೂ ಆಶಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಸಂಘಟಕರಲ್ಲಿ ಪ್ರಮುಖರಾದ ಐರೋಡಿ ವಿಠ್ಠಲ ಪೂಜಾರಿ ಮಾತನಾಡಿ, ಕೋಟ ಹೋಬಳಿ ಭಾಗವನ್ನು ಸಂಘಟಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದ್ದರಿಂದ ಕಾರ್ಯಕ್ರಮ ನಡೆಯುವ ಎ.02 ಹಾಗೂ 03ರಂದು ಯಾರು ಕೂಡ ವೈಯ್ಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಮನವಿ ಮಾಡಿದರು. ಈ ಸಂದರ್ಭ ಉದ್ಯಮಿಗಳಾದ ಎಂ.ಸಿ.ಚಂದ್ರಶೇಖರ್ ಅವರನ್ನು ಶ್ರೀನಿವಾಸ ಕಲ್ಯಾಣ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರತಾಪ್ ಶೆಟ್ಟಿ, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಕನ್ಯಾ ಜಗದೀಶ್, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ವಿಶ್ವಕರ್ಮ ಸಮಾಜದ ಗಣ್ಯರಾದ ಸುಬ್ರಾಯ ಆಚಾರ್ಯ, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಪೂಜಾರಿ ಇದ್ದರು.