ಕೋಟ: ಕುಂದಾಪುರ ಹೃದಯ ಭಾಗದಲ್ಲಿ ಡಿಪ್ಲೊಮೇಟ್ ಹೋಟೇಲ್ ಹತ್ತಿರ ಸಾಹಿತ್ಯ ಚಟುವಟಿಕೆಗಾಗಿ ‘ಪ್ರಕಾಶಾಂಗಣ’ ಎನ್ನುವ ಹೆಸರಿನಲ್ಲಿ ತೆರೆದುಕೊಂಡ ಸ್ಟುಡಿಯೋ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ,ಯಶಸ್ವೀ ಕಲಾವೃಂದದ ಗಾನವೈಭವದೊಂದಿಗೆ ಸಂಪನ್ನಗೊಂಡಿದೆ. ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎಂದೆನಿಸುವ ಯಕ್ಷಗಾನದ ಪೌರಾಣಿಕ ಆಧಾರಿತ ಪದ್ಯಗಳ ಗಾನ ವೈಭವ ಮಸ್ತಕದಲ್ಲಿ ಉಳಿಯುವಂತಹದ್ದು. ಸಂಸ್ಥೆಯ 25 ವರ್ಷದ ತಪಸ್ಸು ಫಲ ನೀಡುವ ಕಾಲ ಕೂಡಿಬಂದಿದೆ. ಒಂದಷ್ಟು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಬೆಳೆದ ಸಂಸ್ಥೆ ಸಾಕಷ್ಟು ಕಲಾವಿದರನ್ನು ಹೊಂದಿ ಸಮಾಜಕ್ಕೆ ಬೆಳಕಾಗಿದೆ ಎಂದು ಉಡುಪಿ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ. ಕಿಶೋರ್ ಕುಮಾರ್ ನುಡಿದರು
ಕುಂದಾಪುರ ಕಲಾಕ್ಷೇತ್ರದಲ್ಲಿ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ‘ಶ್ವೇತಯಾನ-39’ನೇಯ ಕಾರ್ಯಕ್ರಮವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಕಲೆಯು ಕಲಾಭಿಮಾನಿಗಳಿಂದ ಕರಾವಳಿ ತಡಿಯಲ್ಲಿ ಭದ್ರವಾಗಿ ಬೇರೂರಿದೆ. ಕಲೆಯನ್ನು ಚಿಣ್ಣರಿಂದ ಬೆಳಗಿಸಬೇಕು. ವಿಶ್ವವ್ಯಾಪಿಯಾಗಿರುವ ಯಕ್ಷಗಾನವನ್ನು ಬಹು ಎತ್ತರಕ್ಕೇರಿಸಿದವರು ಕಲಾಭಿಮಾನಿಗಳು. ವಿದೇಶದಲ್ಲಿ ನೆಲೆಯಾಗಿರುವ ಅನೇಕ ಯಕ್ಷಗಾನಾಸಕ್ತರು ವಿದೇಶಗಳಲ್ಲಿ ಕನ್ನಡ ಸಂಘ ಹಾಗೂ ಇನ್ನಿತರ ಸಂಘಗಳ ಮೂಲಕ ಅಲ್ಲಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ, ಗೆದ್ದು ಬೆಳೆಸಿದರು ಎಂದು ಹಿರಿಯ ಭಾಗವತರಾದ ರಾಘವೇಂದ್ರ ಮೈಯ್ಯ ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ, ಪವನ್ ಆಚಾರ್, ರಾಹುಲ್ ಅಮೀನ್ ಕೊಮೆ, ಪಂಚಮಿ ವೈದ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.