ಉಡುಪಿ: ಅಖಂಡ ಭಾರತದ ಸಾರ್ವಭೌಮತೆಗೆ ವಿಶೇಷ ಒತ್ತು ನೀಡುವ ಜೊತೆಗೆ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ವಿರೋಧಿಸುತ್ತಾ ತನ್ನ ಜೀವಿತಾವಧಿಯನ್ನು ದೇಶದ ಸಮಗ್ರತೆ ಮತ್ತು ಅಖಂಡತೆಗಾಗಿ ಸಮರ್ಪಿಸಿದ ಭಾರತೀಯ ಜನಸಂಘದ ಸಂಸ್ಥಾಪಕಲ್ಲೊಬ್ಬರಾದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನಾದರ್ಶ ಬಿಜೆಪಿ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಜೂ.23ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದ ಮುಖರ್ಜಿಯವರು ಸ್ವತಂತ್ರ ಭಾರತದ ಪ್ರಥಮ ಕೈಗಾರಿಕಾ ಮಂತ್ರಿಯಾಗಿದ್ದರು. ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಿದ ಮುಖರ್ಜಿಯವರು ‘ಒಂದು ದೇಶದಲ್ಲಿ 2 ಪ್ರಧಾನಿ, 2 ಸಂವಿಧಾನ ಮತ್ತು 2 ಧ್ವಜ ಇರಲು ಸಾಧ್ಯವಿಲ್ಲ’ ಎಂಬ ತತ್ವದಡಿ ಕಾಶ್ಮೀರದ ವಿಮೋಚನೆಗೆ ಹೋರಾಡುತ್ತಾ ಹುತಾತ್ಮರಾದರು. ಅವರ ಸಂಶಯಾಸ್ಪದ ಸಾವು ಇಂದಿಗೂ ನಿಗೂಢವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸುಗೊಳಿಸಿದೆ ಎಂದರು.