ಬೆಂಗಳೂರು : ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆ ಹಾಗೂ ವಿಧಾನಪರಿಷತ್ ಕಲಾಪಗಳಿಗೆ ಗೈರು ಹಾಜರಾಗಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ 12.00 ಗಂಟೆವರೆಗೂ ವಿಧಾನಸೌಧದಲ್ಲೇ ಉಳಿದುಕೊಂಡು ಬಜೆಟ್‌ಗೆ ಉತ್ತರ ನೀಡಲು ಸಕಲ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದರು. ಸಿದ್ಧತೆಯಲ್ಲಿ ತಲ್ಲೀನರಾಗಿದ್ದ ಕಾರಣ ರಾತ್ರಿ ಸರಿಯಾದ ಸಮಯಕ್ಕೆ ಊಟ ಮಾಡಿರಲಿಲ್ಲ ಅವರು ಸ್ನ್ಯಾಕ್ಸ್ ಮಾತ್ರ ತಿಂದಿದ್ದರು ಎಂದು ತಿಳಿದುಬಂದಿದೆ. ಬಳಿಕ ತಡರಾತ್ರಿ ಮನೆಗೆ ಹೋಗಿದ್ದು ಬೆಳಗ್ಗೆ ಫುಡ್ ಪಾಯಿಸನ್ ಸಮಸ್ಯೆ ಉಂಟಾಗಿದೆ. ಹೀಗಾಗಿ ಶುಕ್ರವಾರ ಮನೆಯಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಇಡೀ ದಿನ ವಿಶ್ರಾಂತಿ ಮೊರೆ ಹೋಗಿದ್ದರಿಂದ ಅಧಿವೇಶನಕ್ಕೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನವನ್ನು ಒಂದು ದಿನ ವಿಸ್ತರಿಸಿ ಮುಖ್ಯಮಂತ್ರಿಗಳಿಂದ ಸೋಮವಾರ ಉತ್ತರ ಕೊಡಿಸಲು ಉದ್ದೇಶಿಸಲಾಗಿದೆ ಎಂದು ತಿಳೀದುಬಂದಿದೆ.