ಕುಂದಾಪುರ: ಕೊಲ್ಲೂರಿನ ಸೌಪರ್ಣಿಕ ನದಿಯನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರವನ್ನು ಕೆಡಿಸುತ್ತಿರುವ ಹಾಗೂ ಭೂಮಿಗಳ ಅತಿಕ್ರಮಣಗೊಳಿಸಿದ ಬಗ್ಗೆ ಸಲ್ಲಿಸಲಾದ ಅರ್ಜಿಯನ್ನು ಚೆನ್ನೈ ಹಸಿರು ಪೀಠ ವಿಚಾರಣೆಗೆ ಅಂಗೀಕರಿಸಿದೆ. ಸಾಮಾಜಿಕ ಹೋರಾಟಗಾರ ಹರೀಶ್ ತೋಳಾರ್ ಈ ಅರ್ಜಿಯನ್ನು ಸಲ್ಲಿಸಿದ್ದರು.
ಕೊಡಚಾದ್ರಿ ಬೆಟ್ಟದಿಂದ ಹರಿದು ಬರುವ ಸೌಪರ್ಣಿಕೆ ಪುಣ್ಯನದಿಯಲ್ಲಿ ಸ್ಥಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತದೆ ಹಾಗೂ ಚರ್ಮ ಕಾಯಿಲೆಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರೆಯ ತೆಪ್ಪೋತ್ಸವವೂ ಇದೇ ವುಣ್ಯ ನದಿಯಲ್ಲಿ ನಡೆಯುತ್ತದೆ.
ದುರಂತವೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊಲ್ಲೂರಿನಲ್ಲಿ ತಲೆ ಎತ್ತಿರುವ ಹಾಗೂ ನಿರ್ಮಾಣವಾಗುತ್ತಿರುವ ವಸತಿ ಗ್ರಹಗಳು, ಬಹು ಮಹಡಿಯ ಕಟ್ಟಡಗಳು ಹಾಗೂ ವಾಣಿಜ್ಯ ಕಟ್ಟಡಗಳ ದ್ರವ ಹಾಗೂ ಘನ ತ್ಯಾಜ್ಯಗಳು ನೇರವಾಗಿ ಈ ಪುಣ್ಯ ನದಿಯನ್ನು ಸೇರುತಿದ್ದು, ನದಿಯ ಪಾವಿತ್ರ್ಯತೆಯನ್ನು ಕೆಡಿಸುತ್ತಿದೆ. ಇದರಿಂದ ನದಿಯಲ್ಲಿರುವ ಜಲಚರಗಳು ಹಾಗೂ ಪರಿಸರದ ಪ್ರಾಣಿ ಸಂಕುಲದ ಜೀವಕ್ಕೂ ಕುತ್ತು ಬಂದಿದೆ.
ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು, ಲೇಖನಗಳು ಪ್ರಕಟವಾಗಿದ್ದರೂ ಸಂಬಂಧಪಟ್ಟವರು ಈ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ. ಸಾಕಷ್ಟು ಸಾರ್ವಜನಿಕ ಹೋರಾಟ ನಡೆದರೂ, ಅದು ಕೇವಲ ಅರಣ್ಯ ರೋಧನವಾಗಿದೆ. ಈ ಹಿನ್ನೆಲೆಯಲ್ಲಿ ಸೌಪರ್ಣಿಕಾ ನದಿ ಮತ್ತು ಪರಿಸರದ ರಕ್ಷಣೆಗಾಗಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಪೀಠವು ಅರ್ಜಿಯ ವಿಚಾರಣೆಗೆ ಅಂಗೀಕಾರ ನೀಡಿದೆ. ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಘಾಸಿಯಾಗಿರುವ ಈ ಎಲ್ಲಾ ವಿಚಾರಗಳಿಗೆ ಹಸಿರು ಪೀಠದಿಂದ ನ್ಯಾಯ ದೊರಕಬಹುದು ಎನ್ನುವ ವಿಶ್ವಾಸವಿದೆ ಎಂದು ತೋಳಾರ್ ಅವರು ತಿಳಿಸಿದ್ದಾರೆ