ಉಡುಪಿ : ಮಣಿಪಾಲದಲ್ಲಿ ವೀಕ್ ಎಂಡ್ ಗಳಲ್ಲಿ ಪಬ್ ಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ ಅದನ್ನು ನಿಯಂತ್ರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಬೆನ್ನಲ್ಲೆ ಶನಿವಾರ ಮಣಿಪಾಲದಲ್ಲಿ ಕಾರ್ಯಾಚರಿಸುತ್ತಿರುವ 6 ಪಬ್ ಗಳಲ್ಲಿ ಸಂಗೀತ ಹಾಕದೆ ಮದ್ಯ ವ್ಯವಸ್ಥೆಯನ್ನು ಮಾಡಲು ಸೂಚಿಲಾಗಿದ್ದು ಮಧ್ಯರಾತ್ರಿ 12 ಗಂಟೆಗೆ ಪಬ್ ಬಂದ್ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ವಾರಾಂತ್ಯದಲ್ಲಿ ಮಣಿಪಾಲದಲ್ಲಿನ ಪಬ್ ಗಳಲ್ಲಿನ ತಡರಾತ್ರಿ ವರೆಗಿನ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು ಮಣಿಪಾಲದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಣಿಪಾಲದಲ್ಲಿ ಪಬ್ ಮತ್ತು ಗಾಂಜಾ ವಿಚಾರದಲ್ಲಿ ನಡೆಯುವ ವ್ಯವಹಾರ ಮತ್ತು ನಿಯಮ ಮೀರಿ ಮಧ್ಯರಾತ್ರಿ ನಂತರ ನಡೆಯುತ್ತಿರುವ ವಿದ್ಯಾರ್ಥಿಗಳ ಅಕ್ರಮ ಚುಟುವಟಿಕೆಗಳ ಕುರಿತು ಪೊಲೀಸರಿಗೆ ದೂರು ಬಂದಿತ್ತು.
ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಎಸ್ ಐ ಅಬ್ದುಲ್ ಖಾದರ್, ಅಕ್ಷಯ ಕುಮಾರಿ ನೇತೃತ್ವದಲ್ಲಿ ಮಣಿಪಾಲದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಸತತ ಗಸ್ತು ನಡೆಸಲಾಗುತ್ತಿದೆ. ಹೆಚ್ಚುವರಿಗೆಯಾಗಿ ಮಣಿಪಾಲದಲ್ಲಿ ಕೆಎಸ್ ಆರ್ ಪಿ ಪೊಲೀಸ್ ತುಕಡಿಯನ್ನು ಕೂಡ ನಿಯೋಜಿಸಲಾಗಿದೆ. ಅಲ್ಲದೆ ವಾರಾಂತ್ಯದಂದು ಮಣಿಪಾಲದ ಜಿಲ್ಲಾಧಿಕಾರಿ ರಸ್ತೆ, ಸಿಂಡಿಕೇಟ್ ವೃತ್ತ, ಎಂಐಟಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಕುಡಿದು ವಾಹನ ಚಲಾಯಿಸುವವರ ವಿರುದ್ದ ಮತ್ತು ಒವರ್ ಸ್ಪೀಡ್ ವಾಹನಗಳನ್ನು ತಡೆದು ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ