130
ಉಡುಪಿ: ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಪಡುಬಿದ್ರಿ ನಡ್ನಾಲು ಬಿಲ್ಲಿತೋಟ ನಿವಾಸಿ ಪ್ರೇಕ್ಷಾ (22) ಮೃತ ವಿದ್ಯಾರ್ಥಿನಿ.
ವಾಮಂಜೂರಿನ ಕರಾವಳಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ, ಪ್ರೇಕ್ಷಾ ಪರೀಕ್ಷೆ ಮುಗಿಸಿ ಮನೆಯತ್ತ ಹೊರಟಿದ್ದರು. ಈ ವೇಳೆ ಮಂಗಳೂರು ಕಡೆ ಹೋಗುವ ಸರ್ವಿಸ್ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಗೂಡ್ಸ್ ಟೆಂಪೊ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿತ್ತು. ಸಾರ್ವಜನಿಕರು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದರು.ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ತೀರಾ ಬಡ ಕುಟುಂಬದ ಆಕೆ ತಂದೆಯನ್ನು ಕಳೆದುಕೊಂಡಿದ್ದರು. ಅವರಿಗೆ ತಾಯಿ, ಸಹೋದರ ಇದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

