ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಬೆನ್ನಿಗೇ ಪ್ರತೀಕಾರದ ಕ್ರಮವಾಗಿ ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನ ಜಾವದವರೆಗೆ ಮಂಗಳೂರಿನ ವಿವಿಧೆಡೆ 3 ಪ್ರತ್ಯೇಕ ಘಟನೆಗಳಲ್ಲಿ ಮೂವರು ಮುಸ್ಲಿಂ ಯುವಕರಿಗೆ ಚೂರಿಯಿಂದ ಇರಿಯಲಾಗಿದೆ. ಅಡ್ಯಾರಿನ ಕಣ್ಣೂರು ಬಳಿ ನೌಷಾದ್,ಮಂಗಳೂರಿನಕೊಂಚಾಡಿಯಲ್ಲಿ ಮಹಮ್ಮದ್ ಲುಕ್ಟ್ರಾನ್ ಹಾಗೂ ತೊಕ್ಕೊಟ್ಟಿನ ಮಾಯಾ ಬಜಾರ್ ಬಳಿ ಅಳೇಕಲ ನಿವಾಸಿ ಫೈಝಲ್ ಎಂಬುವರಿಗೆ ಯುವಕರ ಗುಂಪು ಚೂರಿ ಇರಿದಿದ್ದು ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಪಕ್ಕದ ಜಿಲ್ಲೆ ಉಡುಪಿಯ ಶೇಡಿಗುಡ್ಡೆ ಬಳಿ ಗುರುವಾರ ರಾತ್ರಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ (57) ಎಂಬುವರ ಮೇಲೆ ಹಿಂದು ಸಂಘಟನೆಯ ಯುವಕರು ಹಲ್ಲೆ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮಧ್ಯೆ, ಶುಕ್ರವಾರ ಸಂಜೆಯ ವೇಳೆ ಮಂಗಳೂರಿನ ಪಂಜಿಮೊಗರು ಬಳಿ ಇಬ್ಬರು ದುಷ್ಕರ್ಮಿಗಳು ತಲ್ವಾರ್ ನಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

