ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2023-24ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವುದೇ ಯೋಜನೆಗಳಿಲ್ಲದೆ, ಕೇವಲ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದೇ ಘೋಷಿಸಿದ್ದ ನಕಲಿ ಗ್ಯಾರಂಟಿಗಳಿಗಾಗಿ, ರಾಜ್ಯದ ಹಿತ ಮರೆತು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ನಿರಾಶಾದಾಯಕ ಚುನಾವಣಾ ಗಿಮಿಕ್ ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಜೆಟ್ ನಲ್ಲಿ ವಾಹನ, ಅಬಕಾರಿ, ಮುದ್ರಾಂಕ ತೆರಿಗೆಗಳನ್ನು ಹೆಚ್ಚಿಸಿರುವುದು ಎಲ್ಲಾ ವರ್ಗದ ಜನತೆಗೆ ದೊಡ್ಡ ಹೊಡೆತ ನೀಡಲಿದೆ. ನೂತನ ಶಿಕ್ಷಣ ನೀತಿ ‘ಎನ್ಇಪಿ’ಯನ್ನು ವಿರೋಧಿಸುವ ಮೂಲಕ ಶಿಕ್ಷಣ ವ್ಯವಸ್ಥೆಯ ಆಧುನೀಕರಣಕ್ಕೆ ತಿಲಾಂಜಲಿ ನೀಡಲಾಗಿದೆ.
ಕೇವಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಐಎಎಸ್ ತರಬೇತಿಗೆ ಅವಕಾಶ; ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ಮಾಸಿಕ ತಕ್ಷಿಕ್ ಹೆಚ್ಚಳದ ಜೊತೆಗೆ ಅನುದಾನ ಘೋಷಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದೇ ವರ್ಗವನ್ನು ಓಲೈಸುವ ಹಿಂದೂ ವಿರೋಧಿ ಸರಕಾರ ಎಂಬುದನ್ನು ಈ ಬಜೆಟ್ ಸಾಬೀತುಪಡಿಸಿದೆ.
ಹಿಂದಿನ ಬಿಜೆಪಿ ಸರಕಾರ ಘೋಷಿಸಿರುವ ಎಲ್ಲಾ ಜನೋಪಯೋಗಿ ಯೋಜನೆಗಳನ್ನು ಕೈಬಿಡಲಾಗಿದೆ ಹಾಗೂ ಸಮುದಾಯವಾರು ನೂತನ ಅಭಿವೃದ್ಧಿ ನಿಗಮಗಳಿಗೆ ಯಾವುದೇ ಅನುದಾನವನ್ನು ಘೋಷಿಸದೆ ಕಡೆಗಣಿಸುವ ಮೂಲಕ ಸೇಡಿನ ರಾಜಕಾರಣ ಮಾಡಲಾಗಿದೆ.
ಈ ಬಜೆಟ್ ನಲ್ಲಿ ಕರಾವಳಿ ಸಹಿತ ರಾಜ್ಯದ ಗರಿಷ್ಠ ಜಿಲ್ಲೆಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿಂದಿನ ರೂ.300 ಕೋಟಿ ಮಿಗತೆ ಬಜೆಟ್ ಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಬಜೆಟ್ ರೂ.3,269 ಕೋಟಿ ಕೊರತೆ ಬಜೆಟ್ ಆಗಿದೆ. ಇದರ ಪರಿಣಾಮವಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಗಲಿದ್ದು, ಈ ಬಜೆಟ್ ರಾಜ್ಯವನ್ನು ದಿವಾಳಿಯ ಅಂಚಿನತ್ತ ಕೊಂಡೊಯ್ಯಲಿದೆ. ಈ ಬಜೆಟ್ ನಲ್ಲಿ ಸಾಲ ಖಚಿತ; ಆರ್ಥಿಕ ಅಸ್ತವ್ಯಸ್ತ ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ