ಉಡುಪಿ : ಕಾಂಗ್ರೆಸ್ ಸಹಿತ ವಿಪಕ್ಷಗಳು ಸೇರಿ ರಚಿಸುತ್ತಿರುವ ಐಎನ್ಡಿಐಎ ಒಕ್ಕೂಟ ಕೇವಲ ಪ್ರಧಾನಿ ಮೋದಿ ವಿರುದ್ಧ ಮಾತ್ರವಲ್ಲದೆ, ಭಾರತದ ಆತ್ಮದಂತಿರುವ ಸನಾತನ ಹಿಂದೂ ಧರ್ಮದ ವಿರುದ್ಧವಾಗಿದೆ. ಇದಕ್ಕೆ ಪೂರಕವಾಗಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆ ಐಎನ್ಡಿಐಎ ಒಕ್ಕೂಟ ಅಕ್ಷರಶಃ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
‘ಸನಾತನ ಹಿಂದೂ ಧರ್ಮವು ಡೆಂಗ್ಯೂ, ಮಲೇರಿಯಾ, ಕೊರೊನಾ ವೈರಸ್ ಇದ್ದಂತೆ, ಅದನ್ನು ವಿರೋಧಿಸುವುದಲ್ಲ; ನಿರ್ಮೂಲನ ಮಾಡಬೇಕು’ ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಬೇಜವಾಬ್ದಾರಿ ಹೇಳಿಕೆ ಅತ್ಯಂತ ಖಂಡನೀಯ. ಸನಾತನ ಹಿಂದೂ ಧರ್ಮದ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ, ಐಎನ್ಡಿಐಎ ಒಕ್ಕೂಟದ ಭಾಗವಾಗಿರುವ ಉದಯನಿಧಿ ಸ್ಟಾಲಿನ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಒಂದೆರಡು ವರ್ಗಗಳ ಓಲೈಕೆಯ ದುರುದ್ದೇಶದಿಂದ ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಸನಾತನ ಧರ್ಮದ ಮೇಲೆ ಎಳ್ಳಷ್ಟೂ ಪ್ರಭಾವ ಬೀರದು. ಸನಾತನ ಹಿಂದೂ ಧರ್ಮವು ಇಂತಹ ಅನೇಕ ದಾಳಿಗಳು ಮತ್ತು ಕ್ಲಿಷ್ಟಕರ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಿ, ಪರ್ವತದಂತೆ ಮೆಟ್ಟಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ.
ಚಂದ್ರಯಾನ-3ರ ಅದ್ಭುತ ಯಶಸ್ಸು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳಿಗೆ ರೂ.200/- ಇಳಿಕೆ, ದೇಶದ ಜಿಡಿಪಿ ದರದಲ್ಲಿ ಪ್ರಗತಿ, ಅಭಿವೃದ್ಧಿ ಪರ ಆಡಳಿತದ ಯಶಸ್ಸಿನ ಸಹಿತ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ವೃದ್ಧಿಯಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳ ಐಎನ್ಡಿಐಎ ಒಕ್ಕೂಟ, ಚುನಾವಣೆಯನ್ನು ಎದುರಿಸಲು ಯಾವುದೇ ಪ್ರಮುಖ ವಿಚಾರಗಳಿಲ್ಲದೆ, ಮೋದಿಯವರನ್ನು ನೇರವಾಗಿ ಎದುರಿಸಲು ಅಸಮರ್ಥವಾಗಿ ವಾಮಮಾರ್ಗದಲ್ಲಿ ಸನಾತನ ಹಿಂದೂ ಧರ್ಮದ ವಿರುದ್ಧ ಸಂಚು ನಡೆಸುತ್ತಿರುವುದು ವಿಷಾದನೀಯ.
ಐಎನ್ಡಿಐಎ ಒಕ್ಕೂಟದ ಪ್ರಮುಖ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಈ ವಿಚಾರದಲ್ಲಿ ಗಾಢ ಮೌನ ವಹಿಸಿರುವುದು ಸಂಶಯಕ್ಕೆಡೆಮಾಡಿದೆ. ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಹಾಗೂ ಐಎನ್ಡಿಐಎ ಒಕ್ಕೂಟಕ್ಕೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ