ಮಂಗಳೂರು : ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಹರೇಕಳ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯಶವಂತ ಬೆಳ್ಚಡ ಅವರನ್ನು ಅಮಾನತುಗೊಳಿಸಿ ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಯಶವಂತ ಬೆಳ್ಚಡ ಅವರು ಒಂದು ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದು ಸರ್ಕಾರಿ ಕರ್ತವ್ಯಕ್ಕೆ ಲೋಪ ಎಸಗಿದ್ದಾರೆ ಎಂದು ಹರೇಕಳ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಅವರು ಜಿ.ಪಂ. ಸಿಇಒ ಅವರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಹಾಗೂ ಜಿ.ಪಂ.ಸಿಇಒ ಡಾ. ಕುಮಾರ್ ಅವರ ತನಿಖಾ ವರದಿಯನ್ನು ಆಧರಿಸಿ ಯಶವಂತ್ ಬೆಳ್ಚಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲು ಆದೇಶ ನೀಡಲಾಗಿದೆ. ಪಿಡಿಒ ಯಶವಂತ ಬೆಳ್ಚಡ ಅವರು ತನ್ನ ವಿರುದ್ಧ ಬಂದ ಆರೋಪವನ್ನು ಅಲ್ಲಗಳೆದಿದ್ದರೂ, ಆಡಿಯೋ ಸಂಭಾಷಣೆಯ ಸಿಡಿಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ ಎಂಬ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ರವಿಕುಮಾರ್ ಅವರು ಅಮಾನತು ಆದೇಶವನ್ನು ನೀಡಿದ್ದಾರೆ.