ಮೌಲ್ಯಗಳು ಮಾತ್ರ ನಮ್ಮನ್ನ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ, ವಿದ್ಯಾರ್ಥಿಗಳು ಅಂಕಗಳಿಕೆಯ ಜೊತೆಗೆ ಉತ್ತಮ ಹವ್ಯಾಸಗಳನ್ನ ಅಳವಡಿಸಿಕೊಂಡು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗಾದಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ, ಪ್ರತಿ ವಿಷಯವನ್ನು ಮನಸ್ಸಿಟ್ಟು ಕಲಿತಾಗ ಮಾತ್ರ ಆ ವಿಷಯ ಒಲಿಯುತ್ತದೆ ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರಾಧಾಕೃಷ್ಣ ಐತಾಳ್ ಹೇಳಿದರು ಅವರು ಇತ್ತೀಚಿಗೆ ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜು ಕಟಪಾಡಿಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೊಸ ಅವಕಾಶಗಳ ಕಡೆಗೆ ಹೆಜ್ಜೆಗಳನ್ನ ಇಡಬೇಕು ಹೊಸ ಸಾಧ್ಯತೆಗಳನ್ನು ಪ್ರಯತ್ನಿಸಿದಾಗ ಮಾತ್ರ ಆತನೊಳಗೆ ಸಾಧಿಸುವ ಛಲ ಮೂಡುತ್ತದೆ ಎಂದರು. ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಹರಿಪ್ರಸಾದ್ ರಾವ್ ವಾರ್ಷಿಕ ವರದಿ ವಾಚಿಸಿದರು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಸಮಗ್ರ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಆಂಗ್ಲ ಭಾಷಾ ಉಪನ್ಯಾಸಕಿ ನಿಧಿ ಕಾರ್ಯಕ್ರಮವನ್ನು ನಿರೂಪಿಸಿ ,ರಿಯಾ ಸ್ವಾಗತಿಸಿ ಸರಿತಾ ವಂದಿಸಿದರು.

