ಉಡುಪಿ : ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷ 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಆರ್ಟಿಕಲ್ 370 ಮತ್ತು 35ಎ ರದ್ದತಿ, ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ರೂ.6,000 ದಂತೆ 11.3 ಕೋಟಿ ರೈತರಿಗೆ ಆರ್ಥಿಕ ನೆರವಿನ ಜೊತೆಗೆ ಬಿಜೆಪಿ ರಾಜ್ಯ ಸರಕಾರದಿಂದ ರೂ.4,000 ದಂತೆ ಹೆಚ್ಚುವರಿ ನೆರವಿನಡಿ 53 ಲಕ್ಷ ರೈತರಿಗೆ ಪ್ರಯೋಜನ, ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮದ ಭಾಗವಾಗಿ 2 ಬಾರಿ ಸರ್ಜಿಕಲ್ ದಾಳಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ನಾರಿ ಶಕ್ತಿ ವಂದನ ಅಧಿನಿಯಮದಡಿ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಶೇ.33 ಮೀಸಲಾತಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9.6 ಮನೆಗಳಿಗೆ ಉಚಿತ ಎಲ್.ಪಿ.ಜಿ. ಸಂಪರ್ಕ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 11.72 ಕೋಟಿ ಶೌಚಾಲಯಗಳ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧ, ಯಶಸ್ವಿ ಕೋವಿಡ್ ನಿರ್ವಹಣೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆ ಮುಂತಾದ ಅನೇಕ ಜನಪರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇoದ್ರ ಸರಕಾರ ಜಾರಿಗೆ ತರುವ ಮೂಲಕ ಎಲ್ಲ ವರ್ಗದ ಜನತೆಯ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಶೋಭಾ ಕರಂದ್ಲಾಜೆಯವರ ವಿಶೇಷ ಪ್ರಯತ್ನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಅಂಡರ್ ಪಾಸ್, ಓವರ್ ಬ್ರಿಜ್ ನಿರ್ಮಾಣಕ್ಕೆ ಅನುದಾನ, ರೈಲ್ವೆ ವಿದ್ಯುದ್ದೀಕರಣ, ವಂದೇ ಭಾರತ್ ರೈಲು, ಅಮೃತ ಭಾರತ ರೈಲು ನಿಲ್ದಾಣ ಮುಂತಾದ ದಾಖಲೆಯ ಅಭಿವೃದ್ಧಿ ಯೋಜನೆಗಳು ಕಾರ್ಯಕರ್ತಗೊಂಡಿವೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಳ ಸಜ್ಜನಿಕೆಯ ಅನುಭವಿ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ನವ ಉಡುಪಿಯ ನಿರ್ಮಾತೃ ಡಾ! ವಿ.ಎಸ್. ಆಚಾರ್ಯ ಅಭಿವೃದ್ಧಿ ಪರಿಕಲ್ಪನೆಗೆ ಶಕ್ತಿ ತುಂಬಲು ಕೋಟ ಬೆಂಬಲಿಸಿ: ದಿನಕರ ಶೆಟ್ಟಿ ಹೆರ್ಗ
ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲೆಗೆ ಬೇಕಾದಂತಹ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ನವ ಉಡುಪಿಯ ನಿರ್ಮಾತೃ ಎಂದೆನಿಸಿಕೊಂಡ ಅಭಿವೃದ್ಧಿಯ ಹರಿಕಾರ ಕೀರ್ತೀಶೇಷ ಡಾ! ವಿ.ಎಸ್. ಆಚಾರ್ಯರವರ ದೂರದರ್ಶಿತ್ವದ ಅಭಿವೃದ್ಧಿ ಪರಿಕಲ್ಪನೆಗೆ ಶಕ್ತಿ ತುಂಬಲು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಮನವಿ ಮಾಡಿದರು.
ಮಣಿಪಾಲದಲ್ಲಿ ಸುಸಜ್ಜಿತ ಜಿಲ್ಲಾಧಿಕಾರಿಗಳ ಸಂಕೀರ್ಣ, ಉಡುಪಿ ನಗರಸಭೆ ಮೂಲಕ ಸ್ವರ್ಣ 1 ಮತ್ತು 2 ನೇ ಹಂತದ ಕುಡಿಯುವ ನೀರಿನ ಯೋಜನೆ, ಉಡುಪಿ-ಕಲ್ಸoಕ-ಮಣಿಪಾಲ ರಸ್ತೆ ಅಗಲೀಕರಣ, ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆ, ಶಾಲಾ ಕಟ್ಟಡಗಳ ಅಭಿವೃದ್ಧಿ ಸಹಿತ ಜಿಲ್ಲೆಯ ಅಗತ್ಯತೆಗಳಿಗೆ ಸ್ಪಂದಿಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಡಾ! ಆಚಾರ್ಯರವರಿಗೆ ಸಲ್ಲುತ್ತದೆ.
ಇಡೀ ವಿಶ್ವವೇ ಕೋವಿಡ್ ಸಂಕ್ರಾಮಿಕದ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲೇ ಲಸಿಕೆಯನ್ನು ಅಭಿವೃದ್ಧಿಪಡಿಸಿ ದೇಶವಾಸಿಗಳಿಗೆ ಉಚಿತ ಕೋವಿಡ್ ಲಸಿಕೆ ವಿತರಿಸಿ ಜನತೆಯ ಪ್ರಾಣ ರಕ್ಷಣೆ ಮಾಡಿರುವ ಜೊತೆಗೆ ಅನ್ನ ಯೋಜನೆಯ ಮೂಲಕ ದೇಶದ 80 ಕೋಟಿ ಜನತೆಗೆ ತಲಾ 5 ಕೆ.ಜಿ. ಯಂತೆ ಉಚಿತ ಅಕ್ಕಿ ನೀಡುವ ಯೋಜನೆಯನ್ನು ಮುoದಿನ 5 ವರ್ಷಗಳಿಗೆ ವಿಸ್ತರಣೆ ಮಾಡಿ, ದಿನದ 18 ಗಂಟೆಗಳ ಕಾಲ ಶ್ರಮ ವಹಿಸಿ ನೂರಾರು ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸಲು ಡಾ! ವಿ.ಎಸ್. ಆಚಾರ್ಯರವರ ಗರಡಿಯಲ್ಲಿ ಪಳಗಿದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.