ಕುಂದಾಪುರ : ಗೆಲ್ಲುವ ಮಾತಿರಲಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲೇ ಕಾಂಗ್ರೆಸ್ ಎಡವಿದ್ದು, ಸ್ವಯಂ ಪಕ್ಷದಿಂದಲೇ ಉಚ್ಚಾಟನೆಗೊಂಡಿರುವ ಜಯಪ್ರಕಾಶ್ ಹೆಗ್ಡೆಯವರನ್ನು ಹಲವಾರು ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ದುಂಬಾಲುಬಿದ್ದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ದುಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವುದು ವಿಷಾಧನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣಾ ಅಭಿಯಾನ ಪ್ರಮುಖರ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಯಾವುದೇ ಕಾಂಗ್ರೆಸ್ ಮುಖಂಡರ ಹೆಸರನ್ನು ಉಲ್ಲೇಖಿಸದ ಹೆಗ್ಡೆ ಕಾಂಗ್ರೆಸ್ ಪಕ್ಷದ ಚಿಹ್ನೆಗೆ ಮಾತ್ರ ಸೀಮಿತವಾಗಿದ್ದು ಪಕ್ಷೇತರ ಅಭ್ಯರ್ಥಿಯಂತೆ ಮತ ಯಾಚಿಸುತ್ತಿರುವುದು ಶೋಚನೀಯ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ಶೋಭೆ ಎಂದೆನಿಸಿದರೆ ಕ್ಷೇತ್ರದ ಜನತೆ ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಿದ್ದಾರೆ ಎಂದು ಅವರು ತಿಳಿಸಿದರು
ಕೇವಲ ಸ್ವಯಂ ಸ್ವಾರ್ಥ ಸಾಧನೆಗಾಗಿ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾ ಬಂದಿರುವ ಜಯಪ್ರಕಾಶ್ ಹೆಗ್ಡೆಯವರು ತನ್ನ ಬೆಂಬಲಿಗ ಕಾರ್ಯಕರ್ತರಿಗೆ ದ್ರೋಹ ಬಗೆದಿರುವುದು ವಾಸ್ತವ. ಈ ನಿಟ್ಟಿನಲ್ಲಿ ಉಚ್ಚಾಟನೆಗೊಂಡಿದ್ದ ವ್ಯಕ್ತಿಯ ಪರವಾಗಿಯೇ ಮಗದೊಮ್ಮೆ ಮತಯಾಚನೆ ಮಾಡುವ ಸ್ಥಿತಿ ಕಾಂಗ್ರೆಸ್ ಪಾಲಿಗೆ ಒದಗಿ ಬಂದಿರುವುದು ದುರ್ದೈವ. ಪಕ್ಷದಿಂದ ಉಚ್ಛಾಟನೆಗೊಂಡಾಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ರವರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಹೆಗ್ಡೆಯವರು ಇದೀಗ ಓಟಿಗಾಗಿ ಅವರ ಪುತ್ತಳಿಗೆ ಮಾಲಾರ್ಪಣೆಗೈದಿರುವುದು ವಿಪರ್ಯಾಸ. ಖುದ್ದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಚುನಾವಣೆ ಪ್ರಕ್ರಿಯೆಗಾಗಿ ಜಿಲ್ಲೆಯಲ್ಲಿ ಒಮ್ಮೆಯೂ ಕಾಣಿಸದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಭರವಸೆಯೇ ಇಲ್ಲ ಎಂಬುದನ್ನು ಸೂಚ್ಯವಾಗಿ ಪ್ರಕಟಿಸಿದಂತಿದೆ ಎಂದು ಅವರು ತಿಳಿಸಿದರು.
ಸಂಸತ್ತಿನಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯೂ ಇಲ್ಲದೆ ದೇಶದೆಲ್ಲೆಡೆ ಜನತೆಯಿಂದ ತೀರಸ್ಕೃತಗೊಂಡಿರುವ ಕಾಂಗ್ರೆಸ್ ಇದೀಗ ಸುಳ್ಳು ಸುದ್ಧಿಗಳನ್ನು ಉತ್ಪಾದಿಸುವ ಕಾರ್ಖಾನೆಯಂತಿದೆ. ಇದಕ್ಕೆ ಪೂರಕವಾಗಿ ಈ ಹಿಂದೆ ಬಿಜೆಪಿ ಕೇoದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದೆ ಎಂದು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸುಳ್ಳು ಹೇಳಿಕೆ ನೀಡಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಈ ಬಗ್ಗೆ ಅವರು ಸೂಕ್ತ ದಾಖಲೆಯನ್ನು ಜನತೆಯ ಮುoದೆ ಹಾಜರುಪಡಿಸಲಿ ಎಂದು ಕಿಶೋರ್ ಕುಮಾರ್ ಕುಂದಾಪುರ ಸವಾಲು ಹಾಕಿದ್ದಾರೆ.
‘ವಿದೇಶದ ಸ್ವಿಸ್ ಬ್ಯಾಂಕಿನಲ್ಲಿರುವ ಕಾಂಗ್ರೆಸ್ಸಿಗರ ಕಪ್ಪು ಹಣವನ್ನು ಭಾರತಕ್ಕೆ ತಂದರೆ ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂ.15 ಲಕ್ಷದಂತೆ ಹಂಚುವಷ್ಟು ಹಣವಿರಬಹುದು’ ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರುಚಿ ಹೆಗ್ಡೆ ಅಪಪ್ರಚಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಅಪಪ್ರಚಾರವೇ ಕಾಂಗ್ರೆಸ್ ಜೀವಾಳ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ಸಿನ ಹಳೇ ಚಾಳಿ ಯನ್ನು ಜನತೆ ಚೆನ್ನಾಗಿಯೇ ಅರ್ಥೈಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಗ್ರಾಮ ಪಂಚಾಯತ್ ಮಟ್ಟದಿಂದ ವಿವಿಧ ಅನುಭವಗಳೊಂದಿಗೆ ಬೆಳೆದು ಬಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸರಳ ಸಜ್ಜನಿಕೆಯ ಅನುಭವಿ ಹಾಗೂ ಚಾಣಾಕ್ಷ ರಾಜಕಾರಿಣಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮಗದೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಲು ಸಂಘಟಿತ ಪ್ರಯತ್ನದ ಮೂಲಕ ಎಲ್ಲರೂ ಬದ್ಧತೆಯಿಂದ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ ಚುನಾವಣಾ ಅಭಿಯಾನದ ವಿವಿಧ ಆಯಾಮಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪೆರಣoಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ನಳಿನಿ ಪ್ರದೀಪ್ ರಾವ್, ದಿಲೇಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.