ಮಂಗಳೂರು ಬಜರಂಗದಳ ಕಾರ್ಯಕರ್ತ ಜಯಪ್ರಶಾಂತ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಜೈಲಿಗೆ ಹಾಕಿರುವುದು ಖಂಡನೀಯ. ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಯಪ್ರಶಾಂತ್ ಅವರು ಅನೇಕ ವರ್ಷಗಳಿಂದ ಸಂಘಟನೆಯಲ್ಲಿದ್ದುಕೊಂಡು ಧರ್ಮರಕ್ಷಣೆ, ಗೋ ರಕ್ಷಣೆ, ಮಾದಕ ದ್ರವ್ಯ ವಿರುದ್ಧ ಕೆಲಸ ಮಾಡುತ್ತಿದ್ದರು. ವರ್ಷದ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭ ಗಡಿಪಾರು ಶಿಕ್ಷೆಗೆ ಒಳಗಾಗಿದ್ದರು. ಒಂದು ವರ್ಷದಿಂದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಇದ್ದರೂ ಗೂಂಡಾ ಕಾಯ್ದೆಯಡಿ ಜೈಲಿಗೆ ಹಾಕಿರುವುದು ಖಂಡನೀಯ ಎಂದರು
ಜಯಪ್ರಶಾಂತ್ ಮೇಲೆ ಗೋರಕ್ಷಣೆಯ ಮತ್ತು ಪ್ರತಿಭಟನೆಗೆ ಸಂಬಂಧಿಸಿದ ಸುಳ್ಳು ಕೇಸುಗಳು ದಾಖಲಾಗಿವೆ ಹೊರತು ಯಾವುದೇ ಕೊಲೆ, ಸುಲಿಗೆ, ದರೋಡೆಯಂಥ ಸಮಾಜಘಾತುಕ ಕೃತ್ಯಗಳಲ್ಲಿ ಅವರು ಭಾಗಿಯಾಗಿಲ್ಲ. ಹೀಗೆ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿ ಚುನಾವಣೆ ಸಂದರ್ಭ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳದಂತೆ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿದೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಈ ಬಾರಿ ನಾವು ರಾಷ್ಟ್ರ ರಕ್ಷಣೆ ಮಾಡುವವರಿಗೆ ಓಟು ಹಾಕುವಂತೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ತೀರ್ಮಾನ ಮಾಡಿದ್ದೇವೆ. ಹಿಂದೂಗಳಿಗೆ ಒಂದು, ಅಲ್ಪಸಂಖ್ಯಾತರಿಗೆ ಒಂದು ಕಾನೂನು ಎಂಬಂತೆ ಇಬ್ಬಗೆಯ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಈ ಧೋರಣೆಯನ್ನು ಕೈಬಿಡಬೇಕು ಎಂದು ಶಿವಾನಂದ ಮೆಂಡನ್ ಆಗ್ರಹಿಸಿದರು.
ವಿಹಿಂಪ ಜಿಲ್ಲಾಧ್ಯಕ್ಷ ಪುರುಷೋತ್ತಮ ಎಚ್.ಕೆ., ಪ್ರಾಂತ ಬಜರಂಗದಳ ಸಹ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಬಜರಂಗದಳ ಸಂಯೋಜಕ್ ನವೀನ್ ಮೂಡುಶೆಡ್ಡೆ ಇದ್ದರು