Home » ಸರಕಾರದ ವಿರುದ್ಧ ಶಾಸಕ ಕಿಡಿ
 

ಸರಕಾರದ ವಿರುದ್ಧ ಶಾಸಕ ಕಿಡಿ

by Kundapur Xpress
Spread the love

ಮಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, 800ಕ್ಕೂ ಅಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ನಿರ್ವಹಣೆಗೆ ವಿಶೇಷ ಅನುದಾನ ನೀಡುವುದಾಗಲೀ, ಪ್ರತ್ಯೇಕ ಸಭೆ ನಡೆಸುವುದಾಗಲಿ ಯಾವುದನ್ನೂ ಸರ್ಕಾರ ಮಾಡುತ್ತಿಲ್ಲ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ನೀರಿಲ್ಲದೆ ಊರಿಗೆ ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿಗಳು ತಮ್ಮದೇ ಜಿಲ್ಲೆಗೆ ಸೀಮಿತವಾದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳ್ಳಾಡಿಗೆ ಪೂರಕವಾಗಿ ಸರ್ಕಾರ ವರ್ತಿಸುತ್ತಿದೆ. ಇದು ರಾಜ್ಯದ ರೈತರಿಗೆ ಮಾಡುವ ದ್ರೋಹವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ರೈತ ಪರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದ್ದು ರೈತ ವಿರೋಧಿಯಾಗಿ ವರ್ತಿಸುತ್ತಿದೆ. ಬರಗಾಲದ ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಲ್ಲ ಎಂದವರು ಹೇಳಿದರು. ಕಿಸಾನ್ ಸನ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದ 4 ಸಾವಿರ ರೂ. ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿದೆ.

ವಿದ್ಯಾನಿಧಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಪ್ರತಿ ಲೀಟರ್ ಹಾಲಿಗೆ 7 ರೂ. ಪ್ರೋತ್ಸಾಹಧನ ಭರವಸೆ ಈಡೇರಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬೆಳೆ ನಿರ್ವಹಣೆಗೆ ರೈತ ಸಂಪದ ಯೋಜನೆಯಡಿ 100 ಕೋ.ರೂ.ಗಳ ಯೋಜನೆ ಕೈಬಿಟ್ಟಿದೆ. ರೈತ ಕುಟುಂಬಗಳಿಗೆ ನೆರವಾಗುವ 180 ಕೋ.ರೂ.ಗಳ ಜೀವನ್‌ ಜ್ಯೋತಿ ವಿಮಾ ಯೋಜನೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದರು.

   

Related Articles

error: Content is protected !!