ಭಟ್ಕಳ : ತಾಲೂಕಿನ ಹೆಬಳೆಯ ತೆಂಗಿನಗುಂಡಿ ಬೀಚ್ ರಸ್ತೆಗೆ ಹಾಕಲಾಗಿದ್ದ ವೀರ ಸಾವರ್ಕರ್ ಹೆಸರಿನ ನಾಮಫಲಕವನ್ನು ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪಂಚಾಯಿತಿ ಎದುರು ಧರಣಿ ನಡೆಸಿದರು. ಅನಧಿಕೃತವಾಗಿ ಹಾಕಲಾದ ಎಲ್ಲ ನಾಮಫಲಕ ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಒತ್ತಾಯಿಸಿದರು.
ಆರಂಭದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಧರಣಿ ನಡೆಸಿದರು. ವಿಷಯ ತಿಳಿದು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಸಾವರ್ಕರ್ ರವರ ನಾಮಫಲಕ ಮರುಸ್ಥಾಪನೆಗೆ ಅವಕಾಶ ಕೊಡಬೇಕು. ಇಲ್ಲದಿದ್ದಲ್ಲಿ ಅನಧಿಕೃತವಾದ ಎಲ್ಲವನ್ನೂ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಯಾವುದೇ ಲಿಖಿತ ದೂರುಗಳು ಪಂಚಾಯಿತಿಗೆ ಬರದೇ ಇದ್ದರೂ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೇ ಶನಿವಾರ ಏಕಾಏಕಿ ಜೆಸಿಬಿ ಯಂತ್ರ ತಂದು ನಾಮಫಲಕ ಮತ್ತು ಧ್ವಜಸ್ತಂಭ ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಮಧ್ಯೆ ಪಿಡಿಒ ಹೆಬಳೆಯ ಜಾಮಿಯಾಬಾದ್ ರಸ್ತೆ ನಾಮಫಲಕ ತೆರವು ಮಾಡಲು ಮುಂದಾಗದೇ ಇದ್ದಾಗ ಆಕ್ರೋಶಗೊಂಡ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ ತೆಂಗಿನಗುಂಡಿ ಬಂದರನಲ್ಲಿ ಪುನ:ವೀರಸಾರ್ವಕರ್ ನಾಮಫಲಕ ಅಳವಡಿಸಲು ಕಟ್ಟೆಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯಲು ಯತ್ನಿಸಿದಾಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.