ಉಡುಪಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕಾರ್ಯಕ್ರಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಯೋಜನೆಯ ಫಲಾನುಭವಿಗಳಿಗೆ ನೀಡುವ ಸಾಲ ಸೌಲಭ್ಯಕ್ಕೆ ಯಾವುದೇ ರೀತಿಯ ಕಡಿಮೆ ಸಿಬಿಲ್ ಸ್ಕೋರ್ ಮಾನದಂಡ ಅನ್ವಿಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ಕೇಂದ್ರ ಹಣಕಾಸು ಇಲಾಖೆ ಉಪಕಾರ್ಯದರ್ಶಿಯವರು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ (ಎಸ್.ಎಲ್.ಬಿ.ಸಿ) ಗೆ ನೀಡಿದ ಪತ್ರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಪತ್ರವನ್ನು ಉಲ್ಲೇಖಿಸಿ, ಯಾವುದೇ ಕಾರಣಕ್ಕೂ ವಿಶ್ವಕರ್ಮ ಯೋಜನೆಗೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಹಿಂದೆ ನೀಡಿರುವ ಸುತ್ತೋಲೆಯಲ್ಲಿ ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲವೆಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದರೂ ಬ್ಯಾಂಕ್ಗಳು ಗೊಂದಲವಿಲ್ಲದೆ ಸಾಲ ಸೌಲಭ್ಯ ನೀಡಲು ಮುಂದಾಗಬೇಕೆಂದು ಹಾಗೂ ಸಾಲದ ಯಾವುದೇ ಭಾಗವನ್ನು ಮುಂಗಡ ಠೇವಣಿಯಾಗಿ ಇರಿಸಲು ಒತ್ತಾಯಿಸಬಾರದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತನ್ನ ಪತ್ರಕ್ಕೆ ಪ್ರತಿಕ್ರಿಯಿಸಿ ರಾಷ್ಟ್ರಾದಾದ್ಯಂತ ವಿಶ್ವಕರ್ಮ ಯೋಜನೆಯಲ್ಲಿ ಸಿಬಿಲ್ ಸ್ಕೋರ್ ಸಮಸ್ಯೆ ಪರಿಹಾರ ಮಾಡಿದ್ದಕ್ಕಾಗಿ ಸಂಸದ ಕೋಟ ಭಾರತ ಸರ್ಕಾರದ ಹಣಕಾಸು ಸಚಿವಾಲಯಕ್ಕೆ ಕೃತಜ್ಞತೆ ತಿಳಿಸಿ ಎಲ್ಲಾ ಬ್ಯಾಂಕ್ಗಳು ಇದನ್ನು ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿದ್ದಾರೆ.