ದೆಹಲಿ : ಅಯೋಧ್ಯೆಯಲ್ಲಿ ರಾಮನಿಗೆ ಮನೆ ನಿರ್ಮಾಣ ಆಗಿದೆ, ಇನ್ನು ಬಡವರೆಲ್ಲರಿಗೂ ಮನೆ ನಿರ್ಮಾಣ ಆಗಬೇಕು. ಆ ಮೂಲಕ ರಾಮರಾಜ್ಯದ ನಿರ್ಮಾಣ ಆಗಬೇಕು ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರು,ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ನಂತರ ನಡೆದಅಖಂಡ 48 ದಿನಗಳ ಕಾಲ ವಿವಿಧ ಯಜ್ಞಯಾಗಾದಿಗಳೊಂದಿಗೆ ಮಂಡಲೋತ್ಸವವನ್ನು ಪೂರ್ಣಗೊಳಿಸಿ, ದೆಹಲಿಗೆ ಆಗಮಿಸಿದ ಶ್ರೀಗಳು, ಮಂಡಲ ಪೂಜೆಯ ಬಗ್ಗೆ ಧನ್ಯತಾಭಾವ ವ್ಯಕ್ತಪಡಿಸಿದರು.
ಅಯೋಧ್ಯೆಯ ಯಜ್ಞ ಶಾಲೆಯಲ್ಲಿ ಅನೇಕ ಯಜ್ಞಗಳು ನಡೆದಿವೆ. ಭಾರತ ಮಾತ್ರವಲ್ಲ ವಿದೇಶಗಳಲ್ಲೂ ರಾಮಭಕ್ತರು ರಾಮತಾರಕ ಮಂತ್ರ ಜಪಿಸಿದ್ದಾರೆ. ದೇಶದ ಎಲ್ಲ ಕಡೆಯಿಂದ ಭಕ್ತರು ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ನಿತ್ಯ 3 ಲಕ್ಷ ಮಂದಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ ಎಂದರು