ಕೋಟ : ಹೆಚ್ಚು ಅಂಕಗಳಿಸುವುದೇ ಕಲಿಕೆ ಎಂಬ ತಪ್ಪುಕಲ್ಪನೆ ಹೆಚ್ಚಿನ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇದೆ. ಪಾಠೇತರ ಚಟುವಟಿಕೆಯಲ್ಲಿ ಭಾಗವಹಿಸದೆ ಅಂಕದ ಹಿಂದೆ ಹೋದ ವಿದ್ಯಾರ್ಥಿಗಳ ಮುಂದಿನ ಹಂತದಲ್ಲಿ ಸಾಮಾನ್ಯವಾಗಿ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ. ಇಂದು ವಿದ್ಯಾರ್ಥಿ ದೆಶೆಯಲ್ಲಿ ಪಾಠೇತರ ಚಟುವಟಿಗಳಲ್ಲಿ ಪಾಲ್ಗೊಳ್ಳದೆ ಕೇವಲ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಹಂತಗಳಲ್ಲಿ ಕಡಿಮೆ ಅಂಕ ಪಡೆದಾಗ ಆತ್ಮಹತ್ಯೆಗೆ ಮುಂದಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಪಾಠೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದೆ. ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರಕಿದಾಗ ಆತನು ತನ್ನ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಿದೆ. ಅಲ್ಲದೆ ಪ್ರತಿಭೆಯು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತದೆ. ಈ ಧನಾತ್ಮಕ ಚಿಂತನೆಯು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಆತ ಕಲಿಕೆಯಲ್ಲಿ ಮುಂದೆ ಬರುವಂತೆ ಮಾಡುತ್ತದೆ. ಪ್ರತಿಭಾ ಪ್ರದರ್ಶನದ ಮೂಲಕ ಪರಸ್ಪರ ಸಹಕಾರ, ಪರಸ್ಪರ ಪ್ರೋತ್ಸಾಹ ಸ್ವಯಂ ನಿರ್ಧಾರ, ನಾಯಕತ್ವ ಗುಣ ಮೊದಲಾದವುಗಳನ್ನು ಬೆಳಸಿಕೊಳ್ಳಬೇಕು. ಇತ್ತೀಚಿಗೆ ಕೋಟ ವಿವೇಕ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಇಲ್ಲಿ ಸಾಹಿತ್ಯ ಸಂಘದ ಮೂಲಕ ಏರ್ಪಡಿಸಿದ ಸಂಭ್ರಮ ಕಾರ್ಯಕ್ರಮವನ್ನು ಜಾಗಂಟೆ ಬಾರಿಸುವುದರ ಮೂಲಕ ಉದ್ಘಾಟಿಸಿದ ಪ್ರಾಂಶುಪಾಲ ಜಗದೀಶ ನಾವುಡ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಪ್ರತಿ ತರಗತಿಯಿಂದ 20 ನಿಮಿಷದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಅತ್ಯುತ್ತಮವಾಗಿ ಪ್ರತಿಭಾ ಪ್ರದರ್ಶನ ನೀಡಿದ ತರಗತಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ಧನ್ಯವಾದಗೈದರು.