ಕೋಟ: ವಿವೇಕ ವಿದ್ಯಾಸಂಸ್ಥೆ ಸ್ಥಾಪಿಸಿದ ಹಿಂದಿನವರ ಯೋಜನೆ ನಿಜಕ್ಕೂ ಅದ್ಭುತವಾಗಿದೆ. ಅವರಾರು ಹಣವಂತರಲ್ಲ. ಸಮಾಜದ ಮೇಲೆ ಕಾಳಜಿಯಿಂದ ಮಾಡಿದ ಈ ಕೆಲಸ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಭಾರತ ಸರಕಾರದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ ಮಂಡಳಿ ಹಾಗೂ ಹಣಕಾಸು ಸಚಿವಾಲಯದ ಉಪನಿರ್ದೇಶಕ ಹರಿಕೃಷ್ಣ ಮಯ್ಯ ಹೇಳಿದರು. ಕೋಟ ವಿದ್ಯಾಸಂಘ, ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಕಾರ್ಕಡ ರಾಮಚಂದ್ರ ಉಡುಪ ಸ್ಮಾರಕ ಟೆಕ್ನಾಲಜಿ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂಬಯಿ ಒಎನ್ಜಿಸಿ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್, ಟೆಕ್ನಾಲಜಿ ಸೆಂಟರ್ ದಾನಿ ಬನ್ನಾಡಿ ನಾರಾಯಣ ಆಚಾರ್ ಕಾರ್ಕಡ ರಾಮಚಂದ್ರ ಉಡುಪ ಸ್ಮಾರಕ ಟೆಕ್ನಾಲಜಿ ಸೆಂಟರ್ ಲೋಕಾರ್ಪಣೆ ಗೊಳಿಸಿದರು. ಹೈಫೈ ಹೋಂ ಥಿಯೇಟರ್ ಸಂಸ್ಥಾಪಕ ರೋಹನ್ ಪುರ್ಟಾಡೊ ಕಾಠ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕೋಟ ವಿದ್ಯಾ ಸಂಘದ ಅಧ್ಯಕ್ಷ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸಿಎ ಪ್ರಭಾಕರ್ ಮಯ್ಯ ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಈ ಸಂದರ್ಭ ವಿವೇಕ ಹೈಸ್ಕೂಲ್ ವಿಭಾಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ವಿದ್ಯಾ ಸಂಘದ ಉಪಾಧ್ಯಕ್ಷ ಪಿ.ಶ್ರೀಧರ್ ಉಪಾಧ್ಯ, ಕಾರ್ಯದರ್ಶಿ ಎಂ.ರಾಮದೇವ ಐತಾಳ್, ಕೋಶಾಧಿಕಾರಿ ವೆಲೇರಿಯನ್ ಮಿನೇಜಸ್, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್, ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ. ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಬಾರಿಕೆರೆ, ಕೋಟ ವಿದ್ಯಾಸಂಘದ ಮುಖ್ಯಸ್ಥರಾದ ವೆಂಕಟೇಶ್ ಉಡುಪ, ಪ್ರೀತಿರೇಖಾ ಉಪಸ್ಥಿತರಿದ್ದರು. ವಿವೇಕ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಕೆ.ಜಗದೀಶ ನಾವಡ ಸ್ವಾಗತಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಮುಖ್ಯ ಶಿಕ್ಷಕ ಕೆ. ಜಗದೀಶ ಹೊಳ್ಳ ವಂದಿಸಿದರು.