ಬೈಂದೂರು : ಬೈಂದೂರು ತಾಲೂಕಿನ ವಾರಾಹಿ ಯೋಜನೆ ವಂಚಿತ ಗ್ರಾಮಗಳಿಗೆ ಹೊಸ ಯೋಜನೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲು ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಪುಷ್ಪರಾಜ್ ಶೆಟ್ಟಿಯವರು ಈ ವಿಷಯ ಮಂಡಿಸಿದ್ದು ವಾರಾಹಿಯ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು,ಶಾಸಕರು ಇದಕ್ಕೆ ಬೇಕಾದ ಅನುಮತಿ,ಅನುದಾನ ಕೊಡಿಸಲು ಮುಂದಾಗಬೇಕು ಎಂಬ ಮನವಿಯನ್ನು ಅಧಿಕಾರಿಗಳು ಮಾಡಿದ್ದಾರೆ.ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರಿನ ಆಡಳಿತ ಸೌಧದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ವಾರಾಹಿ ಯೋಜನೆಯನ್ನು ಬೈಂದೂರು ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಯೋಜನೆಗಾಗಿ ಡಿಪಿಆರ್ ಸಿದ್ಧಪಡಿಸುವುದು,ಕಸ್ತೂರಿ ರಂಗನ್ ವರದಿ,ಸಿಆರ್‌ಝಡ್,ವನ್ಯಜೀವಿ ಜತೆಗೆ ಡೀಮ್ಡ್ ಫಾರೆಸ್ಟ್ ಇತ್ಯಾದಿ ವಿಷಯಗಳಲ್ಲಿ ಜನ ಸಾಮಾನ್ಯರಿಗೆ ಇರುವ ಗೊಂದಲ,ಸಮಸ್ಯೆಯ ಬಗ್ಗೆಯೂ ಚರ್ಚೆ ನಡೆದಿದೆ.ವಾರಾಹಿ ಯೋಜನೆ ಗಳಿಗೆ ಸಂಬಂಧಿಸಿದಂತೆ 1997 ರಲ್ಲಿ ವಾರಾಹಿ ಯೋಜನಾ ವಿಭಾಗ ದಿಂದ ಅರಣ್ಯ ಇಲಾಖೆಗೆ 129 ಹೆಕ್ಟರ್ ಪರ್ಯಾಯ ಸಿಎ ಭೂಮಿ ಯನ್ನು (ಕಂದಾಯ ಜಮೀನು)ನೀಡಲಾಗಿದೆ.ಹಾಗೂ ನೆಡು ತೋಪು ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಗದಿತ ಮೊತ್ತವನ್ನು ಪಾವತಿ ಮಾಡಲಾಗಿದೆ.ನಂತರ ಜಮೀನನ್ನು ಸೆಕ್ಷನ್ 4 ನೋಟಿಫಿಕೇಶನ್ ಮಾಡಬೇಕಾಗಿರುತ್ತದೆ.ಆದರೆ ಈವರೆಗೂ ಆಗಿಲ್ಲ.ಇದರಿಂದ ಈಗ ಚಾಲ್ತಿಯಲ್ಲಿರುವ ಹಾಗೂ ಮುಂದಿನ ಎಲ್ಲಾ ನೀರಾವರಿ ಯೋಜನೆಗಳನ್ನು ಮುಂದುವರಿಸಲು ತೊಡಕಾಗುತ್ತಿದೆ ಎಂದು ವಾರಾಹಿ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.
ಧೀರ್ಘ ಕಾಲ ಇರುವ ಅಂತರ ಇಲಾಖೆ ಸಮಸ್ಯೆಗಳನ್ನು ಗುರುತಿಸಿ ಪರಸ್ಪರ ಸಮನ್ವಯ ಸಾಧಿಸಿ ಬಾಕಿ ಕಡತಗಳನ್ನು ವಿಲೇವಾರಿ ಮಾಡುವುದು ಆಯಾ ಇಲಾಖೆಗಳ ಜವಾಬ್ದಾರಿ ಆಗಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೂ ಆ ಕಾರಣದಿಂದ ಈಗ ಪ್ರಚಲಿತದಲ್ಲಿರುವ ನೀರಾವರಿ ಯೋಜನೆಗಳು ನಿಂತು ಹೋಗ ಬಾರದು ಹಾಗೂ ಅನುಮೋದನೆಗೆ ಬಾಕಿ ಇರುವ ಯೋಜನಾ ಪ್ರಕ್ರಿಯೆಗಳಿಗೂ ಅಡಚಣೆ ಆಗಬಾರದು ಎಂದು ಶಾಸಕರು ತಿಳಿಸಿದರು.
ವಾರಾಹಿ ಯೋಜನಾ ವ್ಯಾಪ್ತಿಯ ಬಲದಂಡೆಯಲ್ಲಿ ಬರುವ ಬೈಂದೂರು ತಾಲೂಕಿನ 22 ಗ್ರಾಮಗಳಿಗೆ ನೀರಾವರಿ ಉದ್ದೇಶಕ್ಕೆ ವಾರಾಹಿ ಯೋಜನೆ ಯಡಿಯಲ್ಲಿಯೇ ಲಭ್ಯ ನೀರಿನ ಸ್ಥಳೀಯ ನದಿ ಮೂಲಗಳನ್ನು ಗುರುತಿಸಿ ಯೋಜನೆ ತಯಾರಿಸಬೇಕು ಹಾಗೂ ಸೂಕ್ತ ಡಿಪಿಆರ್ ಸಿದ್ಧ ಪಡಿಸಿಕೊಳ್ಳಬೇಕು.ಈ ಬಗ್ಗೆ ಈಗಾಗಲೇ ಹೋರಾಟ ಸಮಿತಿ ರಚನೆ ಆಗಿದ್ದು ಈ ಮಾಹಿತಿ ಶಿಬಿರವು ಆ ದೆಸೆಯಲ್ಲಿ ಮೂರನೇ ಸಭೆ ಆಗಿದೆ ಎಂದು ಶಾಸಕರು ತಿಳಿಸಿದರು.ಇದಕ್ಕೆ ಪೂರಕವಾಗಿ ವಾರಾಹಿ ಬಲದಂಡೆ ಯೋಜನೆಯ ಹೋರಾಟಗಾರರು ಪೂರಕ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ವಾರಾಹಿ ಯೋಜನೆಯ ಭಾಗಶ: ವಂಚಿತ ಗ್ರಾಮಗಳು ಹಾಗೂ ವಿಶೇಷವಾಗಿ ಸಂಪೂರ್ಣ ಸಂತ್ರಸ್ತ ಗ್ರಾಮವಾದ ಯಡಮೊಗೆಯಲ್ಲಿ ಈಗಾಗಲೇ ಜನಾಂದೋಲನ ರೂಪು ಗೊಂಡಿದ್ದು,ಇಲಾಖೆ ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಶಾಸಕರು ತಿಳಿಸಿದರು., # ಕೆಪಿಸಿ ಪವರ್ ಪ್ರಾಜೆಕ್ಟ್ ಹೊಸಂಗಡಿ ಇಲ್ಲಿನ ಅಧಿಕಾರಿಗಳು ಮಾತನಾಡಿ ಯೋಜನೆಯಡಿಯಲ್ಲಿ ಅಣೆಕಟ್ಟೆ, ಪವರ್ ಹೌಸ್,ಕಾಲೋನಿ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.ಹಾಗೂ ಸದರಿ ಜಾಗವನ್ನು ಗುರುತಿಸಿ ಕೆಪಿಸಿ ಸುಪರ್ದಿಯಲ್ಲಿದೆ ಎಂದು ದೃಡೀಕರಣ ನೀಡಲು ಹಲವು ಬಾರಿ ಪತ್ರ ವ್ಯವಹಾರ ಮಾಡಿದ್ದರೂ 30 ವರ್ಷವಾದರೂ ಈವರೆಗೂ ಅರಣ್ಯ ಇಲಾಖೆ ಈ ಬಗ್ಗೆ ಸ್ಪಂದಿಸಿಲ್ಲ ಹಾಗೂ ಆ ಯೋಜನಾ ಪ್ರದೇಶದೊಳಗೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಸಂದರ್ಭದಲ್ಲಿ ಮರ ಕಡಿಯಲು ಹೋದರೆ ಅರಣ್ಯ ಇಲಾಖೆ ಬರುತ್ತದೆ.
ಆದರೆ ಈ ಕಾರಣದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗದ ಸಂದರ್ಭ ಬೆಂಗಳೂರಿನಿಂದ ಕರೆಗಳು ಬರುತ್ತವೆ.ಹೀಗಾಗಿ ತುಂಬಾ ತೊಂದರೆ ಆಗುತ್ತಿದೆ.ಅಲ್ಲದೆ ಈ ವಿಚಾರವಾಗಿ ಬೆಂಗಳೂರಿನಿಂದ ಹಿರಿಯ ಅರಣ್ಯ ಅಧಿಕಾರಿಗಳು ಬಂದು ಪರಿಶೀಲಿಸಿ ಹತ್ತು ದಿವಸದೊಳಗೆ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಒಂದೂವರೆ ವರ್ಷವಾದರೂ ಕ್ರಮವಾಗಿಲ್ಲ ಎಂದು ತಮ್ಮ ಇಲಾಖೆಯ ಬಗ್ಗೆ ಅಳಲು ತೋಡಿಕೊಂಡರು.ಈ ಬಗ್ಗೆ ಉತ್ತರಿಸಿದ ಅರಣ್ಯ ಅಧಿಕಾರಿಯವರು ಈಗಾಗಲೇ ಇರುವ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಾಗ ಇಲಾಖೆ ಎಲ್ಲಿಯೂ ಅಸಹಕಾರ ಮಾಡಿಲ್ಲ,ಮುಂದೆಯೂ ಮಾಡಲ್ಲ ಎಂದರು.
ಶಾಸಕರು ಮಾತನಾಡಿ ಈ ಒಂದು ವಿಚಾರವಾಗಿ ಎರಡೂ ಇಲಾಖೆಯವರು ಮತ್ತೊಮ್ಮೆ ಕೂತು ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಸೂಚಿಸಿದರು ಹಾಗೂ ಈ ಬಗ್ಗೆ ತಮ್ಮಿಂದಾಗುವ ಎಲ್ಲಾ ರೀತಿಯ ಸಹಾಯ ಸಹಕಾರ ಒದಗಿಸುವುದಾಗಿ ತಿಳಿಸಿದರು.ಸಿ ಆರ್ ಜೆ ಡ್ ಇಲಾಖೆಯವರು ತಮ್ಮ ಇಲಾಖೆಗಳ ಮಾಹಿತಿ ಹಾಗೂ ಕರಾವಳಿ ನಿಯಂತ್ರಣ ವಲಯದಲ್ಲಿ ಅಭಿವೃದ್ಧಿ ನಿಷಿದ್ಧ ಪ್ರದೇಶಗಳ ಬಗ್ಗೆ ತಿಳಿಸಿದರು.ಹಾಗೂ ಈ ಬಗ್ಗೆ ಕಾರ್ಯಗಾರದಲ್ಲಿ ಸ್ಥಳೀಯರು ಕೇಳಿದ ಸಂದೇಹಗಳಿಗೆ ಉತ್ತರಿಸಿದರು.ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಹಾಗೂ ಹೊಸದಾಗಿ ನೋಟಿಫಿಕೇಶನ್ನಲ್ಲಿ ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಸೇರಿರುವ ಗ್ರಾಮಗಳ ಬಗ್ಗೆ ಮಾಹಿತಿ ವಿನಿಮಯ ಆಯಿತು.ಕರಡು ಅಧಿಸೂಚನೆಯಲ್ಲಿ ಸೇರಿರುವ ಗ್ರಾಮಗಳ ವ್ಯಾಪ್ತಿಯ ಹಲವು ಪ್ರದೇಶಗಳನ್ನು ಪರಿಸರಸೂಕ್ಷ್ಮ ( ಇಕೋ ಸೆನ್ಸಿಟಿವ್ ಏರಿಯಾ ) ಪ್ರದೇಶಗಳೆಂದು ಗುರುತಿಸಲಾಗಿದೆ ಹಾಗೂ ಈ ವರದಿ ಜಾರಿಯಿಂದ ತಲತಲಾoತರದಿಂದ ತಮ್ಮದೇ ಸ್ವಂತ ಭೂಮಿಗಳಲ್ಲಿ ವಾಸ ಹಾಗೂ ಕೃಷಿ ಮಾಡಿಕೊಂಡಿರುವ ಸ್ಥಳೀಯರಿಗೆ ಅವರ ಇಷ್ಟದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ತೊಂದರೆ ನೀಡಬಾರದಾಗಿ ಸೇರಿದ ಸ್ಥಳೀಯರೆಲ್ಲರೂ ಒಕ್ಕೋರಲಿನಿಂದ ಮನವಿ ಮಾಡಿದರು.
ವನ್ಯ ಜೀವಿ ಅರಣ್ಯ ಅಧಿಕಾರಿ ಮಾತನಾಡಿ ಎಲ್ಲೆಲ್ಲಿ ಅಭಯಾರಣ್ಯ ಹಾಗೂ ರಾಷ್ಟೀಯ ಉದ್ಯಾನವನಗಳ ಸಂರಕ್ಷಣೆ ಸಲುವಾಗಿ ಅದರ ಸುತ್ತಲೂ 10 ಕಿ. ಮೀ ವ್ಯಾಪ್ತಿಯ ಪ್ರದೇಶವನ್ನು ಇಕೋ ಸೆನ್ಸಿಟಿವ್ ಝೋನ್ ಆಗಿ ಘೋಷಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದಾಗ ಹಲವು ಸಮಸ್ಯೆ ಉದ್ಭವಿಸಿದಾಗ ಅರಣ್ಯ ಇಲಾಖೆಯು ಕೋರ್ಟ್ ಗೆ ಅಭಯಾರಣ್ಯ ಹಾಗೂ ರಾಷ್ಟೀಯ ಉದ್ಯಾನವನಗಳ ಸಂರಕ್ಷಣೆ ಆಗುತ್ತಿದೆ ಎಂದು ಮನವರಿಕೆ ಮಾಡಿ ಅವಕಾಶವಿದ್ದಲ್ಲಿ 10 ಕಿ,ಮಿ ವ್ಯಾಪ್ತಿ ಹಾಗೂ ಇಲ್ಲದ ಕಡೆ ಶೂನ್ಯ ಕಿ,ಮಿಯನ್ನು ಇಡಲಾಗಿದೆ ಎಂದರು.ಈ ವಿಚಾರವಾಗಿ ಸ್ಥಳೀಯರು ಕೊರಿದಂತೆ ಮಾನ್ಯ ಶಾಸಕರು ಮಾತನಾಡಿ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಭಯಾರಣ್ಯ ಹಾಗೂ ರಾಷ್ಟೀಯ ಉದ್ಯಾನವನಗಳ ಸುತ್ತ ಇರುವ ಇಕೋ ಸೆನ್ಸಿಟಿವ್ ಝೋನ್ ಅನ್ನು ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಶೂನ್ಯಕ್ಕೆ ಇಳಿಸಲು ಕ್ರಮದ ಸಾಧ್ಯತೆಗಳ ಬಗ್ಗೆ ಪುನರ್ ಪರಿಶೀಲಿಸಲು ಅಧಿಕಾರಿಗಳಗೆ ಸೂಚಿಸಿದರು.
ಕೆರಾಡಿ ಮೂಡುಗಲ್ಲು ಕೇಶವನಾಥ ದೇವಸ್ಥಾನ ಸುತ್ತಮುತ್ತ ಇರುವ 10 ಮನೆಗಳಿಗೆ ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಇಲ್ಲದಿರುವ ಬಗ್ಗೆ ವಿಷಯ ಪ್ರಸ್ತಾಪವಾಗಿ ಶಾಸಕರು ಈ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಇದೆ.ಆ ಭಾಗದ ಜನರು ಕರೆಂಟ್,ರಸ್ತೆ ಇಲ್ಲದೆ ನೋವು ಅನುಭವಿಸುತ್ತಿರುವುದರಿಂದ ಪರಿಹಾರ ಕ್ರಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.ಈ ಬಗ್ಗೆ ಅಧಿಕಾರಿಗಳು ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಈ ಹಿಂದೆ ಕಂದಾಯ ಹಾಗೂ ಇತರೆ ಇಲಾಖೆಗಳ ತಪ್ಪಿನಿಂದಾಗಿ ಸಿಕ್ಕ ಸಿಕ್ಕ ಜಾಗಗಳನ್ನು ಡೀಮ್ದ್ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದರಿಂದ ಈಗ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲಾಯ್ತು.ಹಾಗೂ ಹಿಂದೆ ಇಲಾಖೆ ಮಾಡಿದ ತಪ್ಪುಗಳನ್ನು ಈಗ ಸರಿ ಪಡಿಸುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಶಾಸಕರು ಅರಣ್ಯ, ಸಿಆರ್ ಜೆಡ್,ವಾರಾಹಿ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆ
1. ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳು ಅಥವಾ ಭವಿಷ್ಯದ ಯೋಜಿತ ಕಾರ್ಯಕ್ರಮಗಳ ಕಡತಗಳು ಹಲವು ವರ್ಷ ಗಳಿಂದ ವಿಲೇವಾರಿ ಗೆ ಬಾಕಿ ಆಗಿ ಇಲಾಖಾ ಇಲಾಖಾ ನಡುವಿನ ಸಮನ್ವಯ ಕೊರತೆಯ ಕಾರಣದಿಂದ ನೆನೆಗುದಿಗೆ ಬಿದ್ದಿರುವುದನ್ನು ನೋಡಿ ಸಹಿಸಿಕೊಂಡು ಇರಲು ಸಾಧ್ಯವಿಲ್ಲ.ಇಂತಹ ವಿಳಂಬಗಳಿಗೆ ಆಯಾ ಇಲಾಖೆ ಅಧಿಕಾರಿಗಳೇ ನೇರ ಹೊಣೆಗಾರರು ಇದನ್ನು ಸರಿಪಡಿಸಿಕೊಳ್ಳಬೇಕು.
2. ಕ್ಷೇತ್ರದಲ್ಲಿ ಸಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಮಂಜೂರಾದ ಜಾಗದಲ್ಲಿ ಇರುವ ನೆಡು ತೋಪನ್ನು ವರ್ಷ ಕಳೆದರೂ ತೆರವು ಗೊಳಿಸಿಲ್ಲ ಈ ಬಗ್ಗೆ ಹಲವು ಬಾರಿ ಹೇಳುವವರಿಗೆ ಹೇಳಲಾಗಿದೆ,ಆದರೂ ಕ್ರಮವಾಗಿಲ್ಲ.ಇನ್ನು ಒಂದು ತಿಂಗಳೊಳಗೆ ಕಟಾವಣೆ ಮಾಡಬೇಕು.ಇಲ್ಲದಿದ್ದರೆ ನೆಡು ತೋಪು ಕಡಿಯುವವರೆಗೆ ಆ ಜಾಗದಲ್ಲಿಯೇ ಕೂತು ಪ್ರತಿಭಟಿಸಲಾಗುವುದು.
3. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ನಮೂನೆ -53 & 57 ರಲ್ಲಿ ಅರ್ಜಿ ಹಾಕಿದವರಿಗೆ ಹಾಗೂ 94 ಸಿ /94ಸಿಸಿ ಅಡಿ ಭೂ ಮಂಜೂರಾತಿ ಮಾಡಲು ಡೀಮ್ಡ್ ಅರಣ್ಯ ವ್ಯಾಪ್ತಿಯ ಅರಣ್ಯ,ಕಂದಾಯ ಹಾಗೂ ಸರ್ವೇ ಇಲಾಖೆ ಜಂಟಿ ಸರ್ವೇಯನ್ನು ತ್ವರಿತ ಗೊಳಿಸಲು ಕ್ರಮವಾಗಬೇಕು.
4. ಸಿಆರ್ ಜೆಡ್ ವ್ಯಾಪ್ತಿಯಲ್ಲಿ ಮರವಂತೆ ಗ್ರಾಮದಲ್ಲಿ ಒಂದರಲ್ಲೇ 52 ಕಡತಗಳು ಸೇರಿ ಹಲವು ಗ್ರಾಮಗಳಲ್ಲಿ ಸಿಆರ್ ಜೆಡ್ ಕಾರಣ ವಿಲೇವಾರಿಗೆ ಬಾಕಿ ಇರುವ ಕಡತಗಳ ಪ್ರಸ್ತಾವನೆಗಳನ್ನು ಪರಿಶೀಲಿಸಿ ಹಕ್ಕು ಪತ್ರ ನೀಡಲು ಪೂರಕ ಕ್ರಮವಹಿಸಬೇಕು.