ಕಾರ್ಕಳ: ಸಾವು ಎನ್ನುವುದು ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ ಊಟ ಮಾಡುವಾಗ ಯಮನೂ ಕಾಯುತ್ತಾನೆ ಎಂಬಂತೆ ಊಟ ಮಾಡಿದ ಬಳಿಕ ತಟ್ಟೆ ತೊಳೆಯಲು ಹೋದ ಮಹಿಳೆಯೊಬ್ಬರ ಮೇಲೆ ನೀರಿನ ಟ್ಯಾಂಕ್ ಕುಸಿದುಬಿದ್ದು ಆಕೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿ ಸಂಭವಿಸಿದೆ. ನಂದಳಿಕೆ ಗ್ರಾಮದ ಮಹಮ್ಮಾಯಿ ದೇವಸ್ಥಾನದ ಕಾರ್ಯಕ್ರಮದಲ್ಲಿ 30 ರಂದು ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಬೆಳ್ಳಣ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಲತಾ (50ವರ್ಷ) ಎಂಬವರೇ ಟ್ಯಾಂಕ್ ಕುಸಿದು ದಾರುಣವಾಗಿ ಮೃತಪಟ್ಟಿ ದುರ್ದೈವಿ.
ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಮಾರಿಪೂಜೆಗೆ ಶ್ರೀಲತಾ ತನ್ನ ಪುತ್ರಿ ಪೂಜಾ ಜತೆ ತೆರಳಿದ್ದರು. ಪೂಜೆಯ ಬಳಿಕ ಇತರ ಭಕ್ತರ ಜತೆ ಶ್ರೀಲತಾ ಹಾಗೂ ಪೂಜಾ ಊಟ ಮಾಡಿ ತಟ್ಟೆ ತೊಳೆಯಲು ಹೋದ ವೇಳೆ ಶಿಥಿಲಾವಸ್ಥೆಯಲ್ಲಿದ್ದ ನೀರಿನ ಓವರ್ ಹೆಡ್ ಟ್ಯಾಂಕ್ ಏಕಾಏಕಿ ಕುಸಿದು ಶ್ರೀಲತಾ ಹಾಗೂ ಅವರ ಮಗಳ ಪೂಜಾ ಅವರ ಮೇಲೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಶ್ರೀಲತಾ ಸ್ಥಳದಲ್ಲೇ ಮೃತಪಟ್ಟು ಮಗಳು ಪೂಜಾಳಿಗೆ ಗಂಭೀರ ಗಾಯಗಳಾಗಿವೆ, ಪೂಜಾ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ