ಕಾರ್ಕಳ :ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆ ಚಿಕಿತ್ಸಾ ವೆಚ್ಚ ಉಚಿತವಾಗಿ ಸಿಗಬೇಕೆಂಬ ಮಹತ್ವಾಕಾಂಕ್ಷೆಯ ಯಶಸ್ವಿನಿ ವಿಮಾ ಯೋಜನೆ ಯಡಿಯಲ್ಲಿ ಸಹಕಾರಿ ಕ್ಷೇತ್ರ ದಲ್ಲಿ ಸದಸ್ಯರಾಗಿರುವ ಲಕ್ಷಾಂತರ ಮಂದಿ ಹೈನುಗಾರರು ,ರೈತರು ,ಅಸಂಘಟಿತ ಕಾರ್ಮಿಕ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಕ್ಷಾಂತರ ಮಂದಿಗೆ ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಪ್ಯಾಕೇಜ್ ದರ ಕಡಿಮೆ ಎನ್ನುವ ನೆಪವೊಡ್ಡಿ ಚಿಕಿತ್ಸೆಯನ್ನು ನಿರಾಕರಿಸುತ್ತಿರುವುದು ಬೇಸರದ ಸಂಗತಿ. ಈಗಾಗಲೇ ಯಶಸ್ವಿನಿ ವಿಮಾ ಯೋಜನೆಗೆ ಪ್ರೀಮಿಯಂ ಹಣ ಕಟ್ಟಿ ಅತ್ಯುತ್ತಮ ಆರೋಗ್ಯ ಸೇವೆಯ ನಿರೀಕ್ಷೆಯಲ್ಲಿದ್ದ ನಗರ ಮತ್ತು ಗ್ರಾಮೀಣ ಭಾಗದ ಲಕ್ಷಾಂತರ ಮಂದಿ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಕಳೆದ ವರ್ಷ ನವೆಂಬರ್ ಒಂದರಂದು ಯಶಸ್ವಿನಿ ವಿಮಾ ಯೋಜನೆಗೆ ನೊಂದಣಿ ಪ್ರಕ್ರಿಯೆ ಆರಂಭಗೊಂಡು 2023 ಜನವರಿ 01 ರಂದು ಚಿಕಿತ್ಸೆ ಆರಂಭಿಸಲಾಗಿತ್ತು. ನೋಂದಣಿ ಪ್ರಕ್ರಿಯೆ ಮಾರ್ಚ್ 31ಕ್ಕೆ ಕೊನೆಗೊಂಡಿದ್ದು ಆ ಬಳಿಕ ಇದುವರೆಗೆ ಆರಂಭಗೊಂಡಿಲ್ಲ.
ನೊಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಸಿಗಲಿದ್ದು, ಸರಕಾರಿ ಆಸ್ಪತ್ರೆಯ ಅನುಮತಿ ಅಗತ್ಯ ವಿಲ್ಲದೆ ಇರುವುದರಿಂದ ಸಾಕಷ್ಟು ಸಮಯ ಉಳಿತಾಯವಾಗುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಶಸ್ತ್ರ ಚಿಕಿತ್ಸೆ ಲಭ್ಯವಾಗುವ ಅವಕಾಶವಿತ್ತು. ಇದೀಗ ರಾಜ್ಯದ ಪ್ರತಿಷ್ಠಿತ ಆಧುನಿಕ ಚಿಕಿತ್ಸಾ ಸೌಲಭ್ಯಗಳ ಆಸ್ಪತ್ರೆಗಳು ಆರೋಗ್ಯ ಸೇವೆಯನ್ನು ನಿರಾಕರಿಸಿರುವುದರಿಂದ, ಹಲವು ವರ್ಷಗಳ ನಂತರ ಪುನರಾರಂಭಗೊಂಡಿರುವ ಬಹು ನಿರೀಕ್ಷಿತ ಯಶಸ್ವಿನಿ ಯೋಜನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ರಾಜ್ಯದ ಪ್ರಮುಖ ಆಸ್ಪತ್ರೆಗಳನ್ನು ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ತರುವಂತೆ ಕೂಡಲೇ ಕ್ರಮ ಕೈಗೊಂಡು,” ಯಶಸ್ವಿನಿ” ಯೋಜನೆಯ ಪೂರ್ಣ ಪ್ರಯೋಜನ ಎಲ್ಲರಿಗೂ ದೊರಕುವಂತಾಗಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಮಾನ್ಯ ಸಹಕಾರ ಸಚಿವರಾದ ಶ್ರೀ ರಾಜಣ್ಣರವರಿಗೆ ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಮನವಿ ಮಾಡಿಕೊಂಡಿರುತ್ತಾರೆ
ರಾಜ್ಯದ ಎಲ್ಲಾ ಶಾಸಕರು ಪಕ್ಷಭೇದ ಮರೆತು, ರಾಜ್ಯದ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಖಾಸಗಿ ಆಸ್ಪತ್ರೆಗಳ ಜೊತೆಗೆ ಮಾತುಕತೆ ನಡೆಸಿ, ಚಿಕಿತ್ಸಾ ಸೌಲಭ್ಯ ನಿರಾತಂಕವಾಗಿ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿರುತ್ತಾರೆ