ಉಡುಪಿ : ಕೊಡಗು ಮತ್ತು ಉಡುಪಿ ಜಿಲ್ಲೆಗೆ ನಾಳೆ ಎ.24ರಂದು ನಡೆಯಬೇಕಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮ ರದ್ದುಗೊಂಡಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕರೆಂದೇ ಗುರುತಿಸಿಕೊಂಡಿದ್ದ ಯೋಗಿ ಆದಿತ್ಯನಾಥ್ ಅವರು ವಿ.24ರಂದು ಮಡಿಕೇರಿಯಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಮತ್ತು ಉಡುಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ನಡೆಸಬೇಕಿತ್ತು. ಮಲ್ಪೆ ಸೀ ವಾಕ್ ಬಳಿ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆಸಲಾಗಿತ್ತು. ಯಾವ ಭಾಗದಲ್ಲಿ ವೇದಿಕೆ ಹಾಕಬೇಕು, ಎಷ್ಟು ಜನರಿಗೆ ಸೀಮಿತಗೊಳಿಸಬೇಕು. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಬಸ್ಸು ಲಘು ಉಪಾಹಾರದ ವ್ಯವಸ್ಥೆಗಳ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಅವರ ಕಾರ್ಯಕ್ರಮ ರದ್ದಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ತಿಳಿಸಿದ್ದಾರೆ.