ಕುಂದಾಪುರ : ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ರಾಮ ದೇವಸ್ಥಾನದ ಬಳಿ ನಿದ್ರಿಸುತ್ತಿದ್ದ ಜಾನುವಾ ರುಗಳನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿತರಾದ ಗುಲ್ವಾಡಿ ನಿವಾಸಿಯಾದ ಮೊಹಮ್ಮದ್ ಸೀನಾನ್ (19ವರ್ಷ) ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಆರ್. ನೇತೃತ್ವದ ಪೊಲೀಸ್ ತಂಡ ಗುಲ್ವಾಡಿಯಲ್ಲಿ ಬಂಧಿಸಿದೆ
ಇತ್ತೀಚಿಗೆ ನಾಯಕವಾಡಿ ರಾಮ ದೇವಸ್ಥಾನದ ಬಳಿ ಮಲಗಿರುವ ಮೂರು ಗೋವುಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರಾಮ ದೇವಸ್ಥಾನದ ಹಾಲ್‌ನಲ್ಲಿ ಮಲಗಿರುವ ವ್ಯಕ್ತಿಗಳಿಬ್ಬರು ಮೂತ್ರ ವಿಸರ್ಜನೆಗೆಂದು ಹೊರಗಡೆ ಬಂದತಹ ಸಮಯದಲ್ಲಿ ಅವರನ್ನು ನೋಡಿ ಹೆದರಿಕೊಂಡ ಆರೋಪಿಗಳು ಸ್ಥಳದಲ್ಲಿ ಗೋವು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಬಿಟ್ಟು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ತಂಡದ ಸಿಬ್ಬಂದಿ ಮಿಂಚಿನ ಕಾರ್ಯಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಚರಣೆಯಲ್ಲಿ ಗಂಗೊಳ್ಳಿ, ಪೊಲೀಸ್ ಠಾಣೆ ಪಿಎಸ್ ಹರೀಶ್ ಆರ್., ಗುಪ್ತದಳ ಪಿಎಸ್‌ಐ ಬಸವರಾಜ ಕನಶೆಟ್ಟಿ ಸಿಬ್ಬಂದಿ ರಾಜು ನಾಯ್ಕ, ಶಾಂತರಾಮ ಶೆಟ್ಟಿ ರಾಘವೇಂದ್ರ ಪೂಜಾರಿ, ಸಂದೀಪ ಕುರಾಣಿ ಮತ್ತು ದಿನೇಶ್ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗೋ ಕಳ್ಳರನ್ನು ಬಂಧಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹರೀಶ್ ಆರ್ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಅಭಿನಂದಿಸಿದ್ದಾರೆ

