ಕುಂದಾಪುರ : ತಾಲೂಕಿನ ಸಿದ್ದಾಪುರದ ಕೊಡ್ಡನಬೇರು ಎಂಬಲ್ಲಿ ಪಿಕ್ ಅಪ್ ಬೊಲೆರೋ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಕಾಂತಾವರ ಗ್ರಾಮದ ಸುರೇಶ್ ಕುಮಾರ್ ಮೃತಪಟ್ಟವರು.
ಕಾಂತಾವರ ಗ್ರಾಮದ ಡಾ.ಸುನೀತ್ ಕುಮಾರ್ ಅವರ ಸಹೋದರ ಸುರೇಶ್ ಕುಮಾರ್, ತಂಗಿ ಸುಜಾತ ಹಾಗೂ ತಂಗಿ ಮಗಳು ಶ್ರೀಲಕ್ಷ್ಮೀ ಅವರೊಂದಿಗೆ ಮಗನ ಮದುವೆಯ ಬೀಗರ ಊಟ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರದ ಸಿಗಂಧೂರು ಎಂಬಲ್ಲಿಗೆ ಹೋಗಲು ಕಾರ್ಕಳದಿಂದ ಅವರ ಸಂಬಂಧಿ ದೇವಿಚರಣ ಕಾರಿನಲ್ಲಿ ಹೊರಟಿದ್ದರು. ಸಿದ್ದಾಪುರ ತಲುಪುತ್ತಿದ್ದಂತೆ ಹೊಸಂಗಡಿ ಕಡೆಯಿಂದ ಬರುತ್ತಿದ್ದ ಬೊಲೆರೋ ಪಿಕ್‌ಆಪ್ ವಾಹನ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರಿಗೆ ಡಿಕ್ಕಿಹೊಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ
ಗಂಭೀರ ಗಾಯಗೊಂಡಿದ್ದ ಸುರೇಶ್ ಕುಮಾರ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ದಾರಿಯಲ್ಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ. ಕಾರಿನಲ್ಲಿದ್ದ ಸುಜಾತ, ಶ್ರೀಲಕ್ಷ್ಮೀ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

