ಮೂಲ್ಕಿ: ರಾ.ಹೆ. 66ರ ಮೂಲ್ಕಿ ಜಂಕ್ಷನ್ ಬಳಿಯಲ್ಲಿ ಲಾರಿಯೊಂದರ ಚಾಲಕನ ಅತಿ ವೇಗ ನಿರ್ಲಕ್ಷ್ಯ ಚಾಲನೆಯಿಂದ ಎರ್ರಾ ಬಿರ್ರಿಯಾಗಿ ಚಲಿಸಿ ಹೆದ್ದಾರಿಯಿಂದ ಡಿವೈಡರ್ ಮೇಲೇರಿ ಸರ್ವಿಸ್ ರಸ್ತೆಗೆ ಬಂದು ಪೊಲೀಸ್ ಸಿಬ್ಬಂದಿ, ಸ್ಕೂಟರ್ ಹಾಗೂ ಆಟೋಗೆ ಡಿಕ್ಕಿ ಹೊಡೆದು ಮತ್ತೆ ಡಿವೈಡರ್ ಮೇಲೇರಿ ಹೆದ್ದಾರಿಗೆ ಬಂದು ನಿಂತಿದೆ.
ಅಪಘಾತದಿಂದ ಸ್ಕೂಟರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್ ಸಂಗಪ್ಪ (57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ (42), ಆಟೋ ಚಾಲಕ ಧರ್ಮೇಂದ್ರ (35) ಗಾಯಗೊಂಡು ಮೂಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಲಾರಿ ಮುಲ್ಕಿ ಜಂಕ್ಷನ್ ತಲುಪುತ್ತಿದ್ದಂತೆ ಹೆದ್ದಾರಿ ಅಪಘಾತ ತಡೆಗೆ ಇರಿಸಿದ ಬ್ಯಾರಿ ಕೇಡರ್‌ಗಳನ್ನು ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಸೀದಾ ಎಡಬದಿಯ ಡಿವೈಡರ್ ಮೇಲೇರಿದ್ದು, ಸಮೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ ಅವರಿಗೆ ಡಿಕ್ಕಿ ಹೊಡೆದು ಮತ್ತೆ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಸ್ಕೂಟರ್ ಸವಾರನಿಗೆ ಹೊಡೆದು ಸ್ಕೂಟರನ್ನು ಎಳೆದುಕೊಂಡು ಹೋಗಿ ಬದಿಯಲ್ಲಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದಿದೆ.
ಲಾರಿ ಬಲಬದಿಗೆ ಡಿವೈಡರ್ ಮೇಲೇರಿ ಹೆದ್ದಾರಿಯಲ್ಲಿ ಬಂದು ನಿಂತಿದೆ. ಏನಾಯ್ತು ಎಂದು ತಿಳಿವಷ್ಟರಲ್ಲಿ ಅಪಘಾತ ನಡೆದು ಹೋಗಿದ್ದು, ಅಪಘಾತದಿಂದ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದರೆ, ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯ ಬದಿಯಲ್ಲಿ ಕುಳಿತಿದ್ದ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿದ್ದು ಪರಿಣಾಮವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.