ಬೀದರ್ : ಎಟಿಎಂಗೆ ಹಣ ತುಂಬಿಸುವ ವಾಹನದ ಮೇಲೆ ಹಾಡಹಗಲೇ ಹತ್ತಾರು ಜನರ ಸಮ್ಮುಖ ಬ್ಯಾಂಕ್ ಎದುರೇ ದಾಳಿ ಮಾಡಿರುವ ಇಬ್ಬರು ದರೋಡೆಕೋರರು ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 93 ಲಕ್ಷ ರೂಪಾಯಿ ಹಣದ ಸಮೇತ ಪರಾರಿಯಾಗಿರುವ ಆತಂಕಕಾರಿ ಘಟನೆ ಬೀದರ್ ನಗರದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯದ ಬಳಿಯೇ ನಡೆದ ಈ ಘಟನೆಯಲ್ಲಿ ಎಟಿಎಂಗೆ ಹಣ ತುಂಬಿಸುವ ಸಂಸ್ಥೆ ಯ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ
ಈ ನಡುವೆ, ಬೀದರ್ ಪೊಲೀಸರು ದರೋಡೆಕೋರರ ಬೆನ್ನತ್ತಿದ್ದು, ಹೈದರಾಬಾದ್‌ನಲ್ಲಿ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಶೂಟೌಟ್ ಗೆಯತ್ನ ನಡೆದಿದೆ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಒಬ್ಬ ದರೋಡೆಕೋರ ಗಾಯಗೊಂಡಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ.
ದರೋಡೆಕೋರರ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗಿರೀಶ್ ವೆಂಕಟ್ (42) ಎಂದು ಗುರುತಿಸಲಾಗಿದೆ. ಶಿವಕುಮಾರ ಗುನ್ನಳ್ಳಿ ಎಂಬುವರು ಗಾಯಾಳುವಾಗಿದ್ದು ಹಣ ಸಾಗಿಸುವವಾಗ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.