ಮಂಗಳೂರು : ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದರೋಡೆ ಆರೋಪಿಗಳ ಬಗ್ಗೆ ಲಭ್ಯವಾದ ಸೂಕ್ಷ್ಮ ಮಾಹಿತಿಗಳ ಹಿನ್ನೆಲೆಯಲ್ಲಿ ಈ ಶಂಕಿತ ವ್ಯಕ್ತಿಗಳ ತೀವ್ರ ವಿಚಾರಣೆ ನಡೆಸಲಾಗಿದೆ.
2017ರಲ್ಲಿ ಇದೇ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಒಟ್ಟು ಎಂಟು ಪೊಲೀಸ್ ತಂಡ ರಚಿಸಿ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಸಿಸಿಬಿ ಸೇರಿ ಬೇರೆ ಠಾಣೆಗಳ ಪೊಲೀಸರ ಎಂಟು ತಂಡ ರಚಿಸಲಾಗಿದೆ.
ಕಾರಿನ ಅಸಲಿ ನಂಬರ್ ಪ್ಲೇಟ್ ಪತ್ತೆ ಹಚ್ಚಿರುವ ಪೊಲೀಸರು, ಕಾರಿನ ಮಾಲಕ ತಮಿಳುನಾಡು ಮೂಲದ ವ್ಯಕ್ತಿಯದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆತನ ಪತ್ತೆಗೆ ಒಂದು ತಂಡ ತಮಿಳುನಾಡಿಗೆ ತೆರಳಿದೆ. ಕಳವು ನಡೆಸಿದ ಚಿನ್ನವನ್ನು ಬೇರೆ ಕಾರಿನಲ್ಲಿ ಕೊಂಡೊಯ್ಯಲಾಗಿರುವುದು ತಲಪಾಡಿ ಟೋಲ್ ಬೂತ್ನಲ್ಲಿ ಸಿಕ್ಕ ಕಾರಿನ ಫೋಟೋದಲ್ಲಿ ಇಬ್ಬರಿರುವುದರಿಂದ ಸ್ಪಷ್ಟವಾಗಿದೆ.
ಅದರಂತೆ ಇನ್ನೊಂದು ಕಾರಿನ ಶೋಧ ಮುಂದುವರಿಸಿದಾಗ ಹೊರಜಿಲ್ಲೆಯ ಶವರ್ಲೆಟ್ ಕಾರು ರಸ್ತೆಯಲ್ಲಿ ಸಾಗಿರುವುದು ಕಂಡುಬಂದಿದೆ. ಆ ಕಾರಿನ ವಿಚಾರಣೆ ನಡೆಸಿದಾಗ ಕಿನ್ಯಾದಲ್ಲಿರುವ ಖಾಸಗಿ ಶಾಲೆಗೆ ವಿದ್ಯಾರ್ಥಿಯನ್ನು ಕಾಣಲು ಬಂದ ಹೆತ್ತವರ ಕಾರು ಅದಾಗಿತ್ತು ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಚಿನ್ನ ಸಾಗಾಟದ ಕಾರಿನ ಪತ್ತೆಗಾಗಿ ಮಂಗಳೂರು ಉಡುಪಿ ಮಾರ್ಗದ ಹಲವು ಸಿಸಿಟಿವಿ ದಾಖಲೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.