ಮನೆ ಕಳ್ಳತನದ ಆರೋಪಿ ಬಂಧನ
ಉಡುಪಿಯ ಕಾಡಬೆಟ್ಟುವಿನಲ್ಲಿ ಇತ್ತೀಚೆಗೆ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಆರೀಫ್ ಮುನ್ನಾ ಯಾನೆ ಮೊಹಮ್ಮದ್ ಆರೀಫ್ ಬಂಧಿತ ಆರೋಪಿ. ಕಾಡಬೆಟ್ಟು ರಾಮಣ್ಣ ಶೆಟ್ಟಿ ಕಾಲೊನಿಯ ಜೀವನ ನಗರ ಎಂಬಲ್ಲಿ ಟಿ.ಪ್ರಶಾಂತ್ ಪೈ ಅವರ ಮನೆಯಲ್ಲಿ ಇತ್ತೀಚೆಗೆ ಈತ ಕಳ್ಳತನ ನಡೆಸಿದ್ದ. ತಲಾ ಒಂದು ಗ್ರಾಂ ತೂಕವಿರುವ 7 ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆ ಸೊತ್ತುಗಳ ಅಂದಾಜು ಮೌಲ್ಯ 35,000 ರೂ. ಆಗಿದೆ. ಪೊಲೀಸರ ವಿಶೇಷ ತಂಡವು ಆರೋಪಿಯನ್ನು ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದ ಬಳಿ ಬೈಕ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ..
ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಉಡುಪಿಯ ಕರಂಬಳ್ಳಿ ದೇವಸ್ಥಾನದ ಕೆರೆಯಲ್ಲಿ ಈಜಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಮುಳುಗಿ ಮೃತಪಟ್ಟ ಘಟನೆ ನಡೆದಿದೆ ಲಕ್ಷ್ಮೀಂದ್ರ ನಗರದ ನಿವಾಸಿ ಸಿದ್ದಾರ್ಥ್(19) ಮೃತ ಪಟ್ಟವರು. ಅವರು ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ಸಂಜೆ 6.15ರ ಸುಮಾರಿಗೆ ಶಿವಳ್ಳಿ ವೆಂಕಟರಮಣ ದೇವಳದ ಕೆರೆಯ ನೀರಿನಲ್ಲಿ ಈಜಾಡುವುದಕ್ಕೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ನದಿಗೆ ಬಿದ್ದ ಇಬ್ಬರು ಗಂಭೀರ
ಅಲೆವೂರಿನ ನೈಲಪಾದೆಯ ನದಿಯಲ್ಲಿ ನಾಲ್ವರು ಯುವಕರು ಈಜಾಡಲು ತೆರಳಿದ್ದು, ನದಿ ನೀರಿನಲ್ಲಿ ಸಿಲುಕಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ನಾಲ್ವರ ಪೈಕಿ ಇಬ್ಬರು ನದಿಗೆ ಇಳಿದು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಾಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು, ಈ ವೇಳೆ ಸ್ಥಳೀಯರು ಕೂಡಲೇ ಇಬ್ಬರನ್ನು ಮೇಲೆತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ
ಹೊಳೆಗೆ ಬಿದ್ದು ವ್ಯಕ್ತಿ ಸಾವು
ಬೈಂದೂರು ತಾಲೂಕಿನ ಕಾಲ್ಲೋಡು ಗ್ರಾಮದ ಗುಂಡುವಾಣ ಎಂಬಲ್ಲಿನ ನಿವಾಸಿ ಸೋಮ(66) ಆಕಸ್ಮಿಕ ಹೊಳೆಗೆ ಬಿದ್ದು ಮೃತ ಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತ್ಯಾಜ್ಯ ರಾಶಿಯಲ್ಲಿದ್ದ ವ್ಯಕ್ತಿ ರಕ್ಷಣೆ
ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣ ಬಳಿ ತ್ಯಾಜ್ಯದ ರಾಶಿಯಲ್ಲಿ ಅನಾರೋಗ್ಯದಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿ ಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಹೆಸರು ವಿಳಾಸ ತಿಳಿದು ಬಂದಿಲ್ಲ. ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮನೆಯೆದುರು ನಿಲ್ಲಿಸಿದ್ದ ಬೈಕ್ ಕಳವು
ಕುಂದಾಪುರ: ವಂಡಾರು ಗ್ರಾಮದ ಹೈಕಾಡಿಮನೆ ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಅಶೋಕ ನಾಯ್ಡ್ ಅವರ ಬೈಕ್ ಕಳವಾಗಿದೆ. ಕೂಲಿ ಕೆಲಸ ಮಾಡಿಕೊಂಡಿರುವ ಅವರು ಎಂದಿನಂತೆ ಕೆಲಸ ಮುಗಿಸಿ ಆ.23ರಂದು ಮನೆಯಂಗಳದಲ್ಲಿ ಬೈಕ್ ಇರಿಸಿದ್ದರು. ಬೆಳಗ್ಗೆ ಎದ್ದು ನೋಡುವಾಗ ಬೈಕ್ ಕಳವಾಗಿತ್ತು