Home » ನಾಲ್ವರು ಅಂತಾರಾಜ್ಯ ಆರೋಪಿಗಳ ಬಂಧನ
 

ನಾಲ್ವರು ಅಂತಾರಾಜ್ಯ ಆರೋಪಿಗಳ ಬಂಧನ

by Kundapur Xpress
Spread the love

ಮಂಗಳೂರು : ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಮಂಗಳೂರು ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನುಬಂಧಿಸಿದ್ದಾರೆ.

ಕಾಸರಗೋಡು ಕೊಳತ್ತೂರು ಅಂಚೆ ನಿವಾಸಿ ವಿ. ಪ್ರಿಯೇಶ್ (38), ಕಾಸರಗೋಡು ಮುಳಿಯಾರು ಗ್ರಾಮದ ವಿನೋದ್ ಕುಮಾರ್‌ಕೆ. (33), ಕಾಸರಗೋಡು ಪೆರಿಯಾ ನಿವಾಸಿ ಅಬ್ದುಲ್ ಖಾದರ್‌ಎಸ್.ಎ. (58), ಪುತ್ತೂರು ಬಲ್ನಾಡು ರೂರಲ್‌ನ ಬೆಳಿಯೂರುಕಟ್ಟೆಯ ಆಯೂಬ್ ಖಾನ್ (51) ಬಂಧಿತರು. ಇವರಿಂದ 2,13,500 ರು. ಮೌಲ್ಯದ 500 ರುಪಾಯಿ ಮುಖಬೆಲೆಯ 427 ಖೋಟಾ ನೋಟುಗಳು ಹಾಗೂ 4 ಮೊಬೈಲ್ ಫೋನುಗಳು, 9,030 ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ 500 ರು. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ನಗರದ ಕ್ಲಾಕ್ ಟವರ್‌ ಪರಿಸರದ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಈ ಜಾಲವನ್ನು ಭೇದಿಸಿದ್ದಾರೆ ಎಂದರು.

ಆರೋಪಿಗಳ ಪೈಕಿ ಪ್ರಿಯೇಶ್ ಎಂಬಾತ ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್‌ ಹೊಂದಿದ್ದು, ಇದರಲ್ಲಿ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದ. ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಝಿಕೋಡ್ ಮತ್ತು ದೆಹಲಿಯಿಂದ ಖರೀದಿಸಿಕೊಂಡು, ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ. ಈ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುವುದು ಎಂದು ಕಮಿಷನ‌ರ್ ತಿಳಿಸಿದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್‌ಎಚ್.ಎಂ., ಸಿಸಿಬಿ ಪಿಎಸ್‌ಐಯವರಾದ ನರೇಂದ್ರ, ಸುದೀಪ್, ಎಎಸ್‌ಐ ಮೋಹನ್ ಕೆ.ವಿ. ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಭಾಗವಹಿಸಿದ್ದಾರೆ.

   

Related Articles

error: Content is protected !!