ಉಡುಪಿ : ನಗರದ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬಳಿಯ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಬ್ದುಲ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಸೆನ್ ಠಾಣಾಧಿಕಾರಿ ರಾಮಚಂದ್ರ ನಾಯಕ್ ಅವರಿಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 2 ಕೆಜಿ 344 ಗ್ರಾಂ ಗಾಂಜಾ, ಮೊಬೈಲ್ ಫೋನ್, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬ್ಯಾಗ್, ಪ್ಲಾಸ್ಟಿಕ್ ಕವರ್, ವೆಯಿಂಗ್ ಮಿಶನ್, ಚೂರಿ, 5810 ರೂ ನಗದು ಮತ್ತು ಗಾಂಜಾ ಸಾಗಾಟಕ್ಕೆ ಬಳಸಿದ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಅಕ್ರಮ್ ಭಟ್ಕಳ ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ತನಿಖೆಯ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.