ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಅಕ್ರಮ ಸಾಗಣೆ ಪ್ರಕರಣ ಸಂಬಂಧ ಬಗೆ ಬಗೆಯ ಮಾಹಿತಿಗಳು ಹೊರಬರುತ್ತಲೇ ಇದ್ದು ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಇದರ ಭಾಗವಾಗಿ ಪಂಚತಾರಾ ಹೊಟೇಲ್ ಮಾಲೀಕನ ಪುತ್ರನನ್ನು ಬಂಧಿಸಿದ್ದಾರೆ.
ಮತ್ತೊಂದೆಡೆ ಪ್ರಭಾವಿ ಸಚಿವರಿಬ್ಬರು ರನ್ಯಾ ರಕ್ಷಣೆಗೆ ಮುಂದಾಗಿದ್ದಾರೆ ಬಗ್ಗೆಯೂ ಆರೋಪಗಳು ಜೋರಾಗಿದ್ದು, ಆ ಬಗ್ಗೆಯೂ ತನಿಖೆ ಮುಂದುವರಿದಿದೆ. ಮನೆ ಜಪ್ತಿ ಸಂದರ್ಭದಲ್ಲಿ ರನ್ಯಾ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಾಚ್ ಸೇರಿ ಇತರ ಐಷಾರಾಮಿ ಉಡುಗೊರೆಗಳು ಸಿಕ್ಕಿದ್ದು, ಅದರ ಮೂಲವನ್ನು ಶೋಧಿಸುತ್ತಿದ್ದಾರೆ. ಇದರಲ್ಲಿ ಆ ಪ್ರಭಾವಿ ಸಚಿವನ ಉಡುಗೊರೆಯೂ ಸೇರಿದೆಯಾ ಎಂಬ ಬಗ್ಗೆಯೂ ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿದೆ

ಉದ್ಯಮಿ ತರುಣ್ ರಾಜು ಬಂಧನ :
ರನ್ಯಾಗೆ ಸಂಬಂಧಿಸಿದ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಇರುವ ಸಂಪೂರ್ಣ ಮಾಹಿತಿಯನ್ನು ಜಾಲಾಡಿದಾಗ ಆಕೆಯ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಪ್ರಭಾವಿ ರಾಜಕೀಯ ನಾಯಕರ ಮತ್ತು ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಈ ದಾಖಲೆಗಳನ್ನು ಮುಂದಿಟ್ಟುಕೊಂಡು ತನಿಖೆ ಮುಂದುವರಿಸಿದ ಅಧಿಕಾರಿಗಳು ಎರಡನೇ ಆರೋಪಿಯಾಗಿ ಡಿ ಆರ್ ಐ ಅಧಿಕಾರಿಗಳು ರನ್ಯಾ ಅವರ ಆಪ್ತ ಸ್ನೇಹಿತ ತರುಣ್ ರಾಜುವನ್ನು ಬಂಧಿಸಿದ್ದಾರೆ. ಚಿನ್ನ ಅಕ್ರಮ ಸಾಗಣೆಯನ್ನು ರನ್ಯಾ ಒಬ್ಬರೇ ಮಾಡಿರಲು ಸಾಧ್ಯವಿಲ್ಲ ಎಂಬ ಅಂಶ ತನಿಖೆ ವೇಳೆ ಅಧಿಕಾರಿಗಳಿಗೆ ಗೊತ್ತಾಗಿ ರನ್ಯಾಳನ್ನು ತೀವ್ರವಾಗಿ ವಿಚಾರಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಮೇಲೇ ಅನುಮಾನ
ರನ್ಯಾ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣವನ್ನು ದೆಹಲಿಯ ಡಿಆರ್‌ಐ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಭೇದಿಸಿದ ಹಿನ್ನೆಲೆಯಲ್ಲಿ, ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಹಾಗೂ ಡಿಆರ್‌ಐ ತಂಡಕ್ಕೆ ಅನುಮಾನ ಮೂಡಿಸಿದೆ. ಚಿನ್ನ ಸಾಗಾಟದ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನವಿದ್ದು, ಬೆಂಗಳೂರು, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸಿಬಿಐ ಹಾಗೂ ಡಿಆರ್‌ಐ ತಂಡಗಳು ಠಿಕಾಣಿ ಹೂಡಿವೆ

