ಕುಂದಾಪುರ : ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲು ರೈಲಿನಲ್ಲಿ ಹೊರಟಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೂಡ್ಲಕಟ್ಟೆಯ ರೈಲು ನಿಲ್ದಾಣ ಸಮೀಪ ಸಂಭವಿಸಿದೆ ಕೇರಳದ ಕೊಲ್ಲಂ ಜಿಲ್ಲೆಯ ಸೆಬಾಸ್ಟಿನ್ (52) ಮೃತ ವ್ಯಕ್ತಿ.
ಇವರು ಸ್ನೇಹಿತ ಅನಿಲ್ ಕುಮಾರ್ ಬಿ. (46) ಅವರೊಂದಿಗೆ ಲಕ್ಕೋದಲ್ಲಿ ಸೇನೆಯಲ್ಲಿದ್ದ ಹರೀಶ್ ಅವರು ಅನಾರೋಗ್ಯವಿದ್ದ ಕಾರಣ ನೋಡಲು ಹಾಗೂ ಅಯೋಧ್ಯೆ, ಕಾಶಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲು ರೈಲಿನಲ್ಲಿ ಹೊರಟಿದ್ದರು. ಅಲ್ಲಿಂದ ಎರ್ನಾಕುಲಂಗೆ ಹೋಗುವ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದಾಗ ಕುಂದಾಪುರ ಸಮೀಪ ರಾತ್ರಿ ಸೆಬಾಸ್ಟಿನ್ ಅವರಿಗೆ ತೀವ್ರ ಎದೆ ನೋವು ಕಾಣಿಸಿದೆ. ಕೂಡಲೇ ರೈಲ್ವೇ ಸಿಬಂದಿಗೆ ತಿಳಿಸಿದ್ದು ಅವರು ಮುಂದಿನ ನಿಲ್ದಾಣವಾದ ಮೂಡ್ಲಕಟ್ಟೆಯಲ್ಲಿ ಇಳಿಸಿ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು.
ರಾತ್ರಿ 8.54ಕ್ಕೆ ರೈಲು ಕುಂದಾಪುರದ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಸೆಬಾಸ್ಟಿನ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.