ಲಖನೌ : ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಬೆನ್ನಲ್ಲೆ ಕುಂಭಮೇಳದ ಮೇಲೆ ದಾಳಿಗೆ ಯೋಜಿಸಿದ ಮತ್ತೊಬ್ಬ ಶಂಕಿತ ಉಗ್ರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಲಜರ್ ಮಸೀಹ್ ಬಂಧಿತ ಆರೋಪಿ
ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಅಮೆರಿಕದ ಖಲಿಸ್ತಾನಿ ಉಗ್ರರ ಜೊತೆ ಸಂಪರ್ಕ ಹೊಂದಿದ್ದು, ಬಬ್ಬರ್ ಖಾಲ್ಪಾ ಇಂಟರ್‌ನ್ಯಾಷನಲ್ (ಬಿಕೆಐ) ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಲಜರ್‌ನನ್ನು ಬಂಧಿಸಲಾಗಿದೆ.
ಕುಂಭ ಸ್ಪೋಟಕ್ಕೆ ಸಂಚು :
ಈ ಕುರಿತು ಮಾಹಿತಿ ನೀಡಿದ ಉ.ಪ್ರ. ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಲಜರ್ ದೊಡ್ಡ ಭಯೋತ್ಪಾದಕ ದಾಳಿಯನ್ನು ಯೋಜಿಸಿದ್ದ ಆದರೆ ತೀವ್ರವಾದ ಭದ್ರತಾ ತಪಾಸಣೆ ಇದ್ದ ಕಾರಣ ಆತನ ಯೋಜನೆ ವಿಫಲವಾಗಿತ್ತು. ಆ ಬಳಿಕ ಈತ ನಕಲಿ ದಾಖಲೆ ಬಳಸಿ ಪೋರ್ಚ್‌ಗಲ್‌ಗೆ ಪರಾರಿಯಾಗಲು ಸಂಚು ರೂಪಿಸಿದ್ದ’ ಎಂದು ಹೇಳಿದ್ದಾರೆ.
ಶಸ್ತ್ರಾಸ್ತ್ರ ವಶ :
ಬಂಧಿತನಿಂದ ಕೆಲವು ಸ್ಫೋಟಕಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ 3 ಹ್ಯಾಂಡ್ ಗ್ರೆನೇಡ್‌ಗಳು, 2 ಡಿಟೋನೇಟರ್‌ಗಳು, 1 ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು 13 ಕಾಟ್ರಿಜ್‌ಗಳು ಸೇರಿವೆ. ಫಾಜಿಯಾಬಾದ್ ವಿಳಾಸವಿರುವ ಆಧಾರ್‌ಕಾರ್ಡ್, ಮೊಬೈಲ್ ಫೋನ್ ಮತ್ತು ಸಿಮ್ ಅನ್ನೂ ವಶಡಿಸಿಕೊಳ್ಳಲಾಗಿದೆ.

