ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಮೇಲೆ ಬುಧವಾರ ದಿಢೀರ್ ಲೋಕಾಯುಕ್ತ ದಾಳಿ ನಡೆದಿದ್ದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಲೆಕ್ಕ ಸಹಾಯಕ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಂಗೊಳ್ಳಿ ಗ್ರಾಮ ಸುಲ್ತಾನ್ ಮೊಹಲ್ಲಾ ನಿವಾಸಿ ಮೊಹಮ್ಮದ್ ಹನೀಫ್ ಎಂಬುವರು ನೀಡಿದ ದೂರಿನ ಮೇರೆಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ಮೇಲೆ ನಡೆಸಿದ ಉಡುಪಿ ಮತ್ತು ಮಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಎಚ್. ಮತ್ತು ಲೆಕ್ಕ ಸಹಾಯಕ ಶೇಖರ್ ಜಿ. ಅವರು 22 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ
ರಾತ್ರಿ ತನಕವೂ ಪಂಚಾಯತ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದು ನಂತರ ಆರೋಪಿಗಳಾದ ಉಮಾಶಂಕರ್ ಹಾಗೂ ಶೇಖರ್ ಜಿ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ
ಮಂಗಳೂರಿನ ಲೋಕಾಯುಕ್ತ ಪೊಲೀಸ್ ನಟರಾಜ್ ಎಂ. ಎ. ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಪ್ರಭಾರ ಪೊಲೀಸ್ ಉಪಾಧೀಕ್ಷಕ ಮಂಜುನಾಥ, ಮಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಮಾನುಲ್ಲ ಎ. ಮತ್ತು ಚಂದ್ರಶೇಖರ್ ಕೆ. ಎನ್. ನೇತೃತ್ವದಲ್ಲಿ ಉಡುಪಿ ಲೋಕಾಯುಕ್ತ ಠಾಣೆ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಮಲ್ಲಿಕಾ, ರೋಹಿತ್, ಪುಷ್ಪಾವತಿ, ಸತೀಶ್ ಹಂದಾಡಿ, ಅಬ್ದುಲ್ ಜಲಾಲ್, ರವೀಂದ್ರ, ರಮೇಶ್ ಪ್ರಸನ್ನ ದೇವಾಡಿಗ, ಸತೀಶ್ ಆಚಾರ್, ಸೂರಜ್, ರಾಘವೇಂದ್ರ ಹೊಸಕೋಟೆ, ಸುಧೀರ್ ಹಾಗೂ ಠಾಣಾ ರಾಧಾಕೃಷ್ಣ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
ಘಟನೆ ವಿವರ
ಮೊಹಮ್ಮದ್ ಹನೀಫ್ ಎಂಬುವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸರ್ವೇ ನಂಬರ್ 108/13 ರಲ್ಲಿ 8.25 ಸೆಂಟ್ಸ್ ಜಾಗವನ್ನು 9/11 ಮಾಡುವ ಉದ್ದೇಶದಿಂದ ನವೆಂಬರ್ 2024ರಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ದಾಖಲೆಗಳೊಂದಿಗೆ ಅರ್ಜಿ ನೀಡಿದ್ದರು. ಈ ಬಗ್ಗೆ ಪಿಡಿಒ ಉಮಾಶಂಕರ್ ಹಾಗೂ ಲೆಕ್ಕ ಸಹಾಯಕ ಶೇಖರ್ ಅವರು ಈವರೆಗೂ ಕೆಲಸ ಮಾಡಿ ಕೊಡದೆ ಸತಾಯಿಸಿ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ಜ.22ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.