Home » ನೇಜಾರು ಹತ್ಯೆ : ವಿಚಾರಣೆ ಡಿ.11ಕ್ಕೆ ಮುಂದೂಡಿಕೆ
 

ನೇಜಾರು ಹತ್ಯೆ : ವಿಚಾರಣೆ ಡಿ.11ಕ್ಕೆ ಮುಂದೂಡಿಕೆ

ನೇಜಾರಿನಲ್ಲಿ ನಾಲ್ವರ ಹತ್ಯೆ ಪ್ರಕರಣ

by Kundapur Xpress
Spread the love

ಉಡುಪಿ : ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲನನ್ನು ನೇಮಕ ಮಾಡಿದ್ದು, ಮುಂದಿನ ವಿಚಾರಣೆ ಸಂದರ್ಭ ವಕೀಲರನ್ನು ಹಾಜರುಪಡಿಸುವುದಾಗಿ ಗುರುವಾರ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಹಿರಿಯಡ್ಕ ಜೈಲಿನಲ್ಲಿದ್ದ ಪ್ರವೀಣ್ ಚೌಗುಲೆಯನ್ನು ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಜರಿದ್ದರು.

ಈ ವೇಳೆ ಆರೋಪಿಯು ತಾನು ತನ್ನ ಪರ ವಕಾಲತ್ತು ನಡೆಸಲು ಹೊಸ ವಕೀಲರಾದ ಬೆಂಗಳೂರಿನ ಶ್ರೀಧ‌ರ್ ಅವರನ್ನು ನೇಮಕ ಮಾಡಿದ್ದು, ಮುಂದಿನ ದಿನಾಂಕದಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ. ಬಳಿಕ ನ್ಯಾಯಾಧೀಶರಾದ ಸಮಿವುಲ್ಲಾ ಮುಂದಿನ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿ ಆದೇಶ ನೀಡಿದರು.

ಆ ದಿನ ಮುಂದಿನ ಸಾಕ್ಷಿ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದುದರಿಂದ ಸಾಕ್ಷಿಗಳು ಸಮನ್ಸ್ ಸ್ವೀಕರಿಸಿದ ಬಳಿಕವಷ್ಟೇ ನ್ಯಾಯಾಲಯ ಮುಂದೆ ಹಾಜರಾಗುವಂತೆ ನ್ಯಾಯಾಧೀಶರು ಸಾಕ್ಷಿಗಳಿಗೆ ಸೂಚಿಸಿದರು.

ಮುಂದಿನ ವಿಚಾರಣೆಗೆ ಆರೋಪಿಯನ್ನು ಮತ್ತೆ ಬೆಂಗಳೂರಿನಿಂದ ಕರೆ ತರುವ ಬದಲು ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು. ನಂತರ ಆರೋಪಿಯನ್ನು ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಯಿತು.

   

Related Articles

error: Content is protected !!