ಬೆಂಗಳೂರು : ತಮ್ಮ ಪ್ರಿಯತಮೆಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಎಂಬ ಕಾರಣಕ್ಕೆ ತಮ್ಮದೇ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆಗೈದು ರಾಜಕಾಲುವೆಗೆ ಎಸೆದ ಆರೋಪದ ಮೇರೆಗೆ ಕನ್ನಡ ಚಲನಚಿತ್ರ ರಂಗದ ‘ಚಾಲೆಜಿಂಗ್ ಸ್ಟಾರ್’ ನಟ ದರ್ಶನ್ ತೂಗುದೀಪ ಹಾಗೂ ಅವರ ಪ್ರಿಯತಮೆ. ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಔಷಧಿ ಮಾರಾಟ ಅಂಗಡಿ ಕೆಲಸಗಾರ ರೇಣುಕಾ ಸ್ವಾಮಿ (34ವರ್ಷ) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ದರ್ಶನ್, ಅವರ ಆಪ್ತೆ ಪವಿತ್ರಾ ಗೌಡ, ಸಹಚರರಾದ ಪಟ್ಟಣಗೆರೆ ವಿನಯ್ ಪವನ್, ಪ್ರದೋಶ್, ನಂದೀಶ್, ಕೇಶವ ಮೂರ್ತಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ದರ್ಶನ್ ಕಾರು ಚಾಲಕ ಲಕ್ಷ್ಮಣ್, ದೀಪಕ್ ಕುಮಾರ್, ನಾಗರಾಜ್, ನಿಖಿಲ್, ಕಾರ್ತಿಕ್ ಬಂಧನ ಕ್ಕೊಳಗಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ 6 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.