ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 38.39 ಕೋಟಿ ರೂಪಾಯಿ ಹಣವನ್ನು ಹವಾಲಾ ಮೂಲಕ ದುಬೈಗೆ ವರ್ಗಾಹಿಸಿ 49.6 ಕೆ.ಜಿ. ಚಿನ್ನ ಖರೀದಿಸಿದ್ದರು. ಅದನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ತಂದು ಮಾರಾಟ ಮಾಡಿದ್ದರು ಎಂದು ಆಕೆಯ ಸ್ನೇಹಿತ ಸಾಹಿಲ್ ಜೈನ್ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ)ದ ವಿಚಾರಣೆ ವೇಳೆ ಬಾಯ್ದಿಟ್ಟಿದ್ದಾನೆ.
ತಾನು ದುಬೈಗೆ 38.39 ಕೋಟಿ ರು. ಹವಾಲಾ ಹಣ ವರ್ಗಾವಣೆಯಲ್ಲಿ ರನ್ಯಾಗೆ ಸಹಕರಿಸಿದ್ದೆ. ಅಲ್ಲದೆ, ಬೆಂಗಳೂರಿನಲ್ಲಿ 3 ಹಂತದಲ್ಲಿ ಆಕೆಗೆ 1.7 ಕೋಟಿ ರು. ಹವಾಲಾ ಮೂಲಕ ಹಣ ತಲುಪಿಸಿದ್ದಾಗಿ ಸಹ ವಿಚಾರಣೆ ವೇಳೆ ಸಾಹಿಲ್ ತಪ್ಪೋಪ್ಪಿಗೆ ಹೇಳಿಕೆ ನೀಡಿದ್ದು ಈ ಕುರಿತ ಮಾಹಿತಿಯನ್ನು ಡಿಆರ್‌ಐ ಕೋರ್ಟ್‌ಗೆ ಮಾಹಿತಿ ಸಹ ನೀಡಿದೆ.
ಮಾ.3ರಂದು ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವಾಗ ಬೆಂಗಳೂರು ಏರ್ಪೋಟ್ ನಲ್ಲಿ ರನ್ಯಾರನ್ನು ಡಿಆರ್‌ಐ ಬಂಧಿಸಿತ್ತು. ಈ ವೇಳೆ 12 ಕೋಟಿ ರು. ಮೌಲ್ಯದ 14.2 ಕೆ.ಜಿ. ಚಿನ್ನ ಜಪ್ತಿಯಾಗಿತ್ತು. ಬಳಿಕ ರನ್ಯಾ ವಾಟ್ಸಾಪ್ ಮಾಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಸಾಹಿಲ್ ಪಾತ್ರ ಬಯಲಾಯಿತು

