ಮಹಾರಾಷ್ಟ್ರ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಪ್ರತಿಷ್ಠಿತ ಶಾಲೆಯೊಂದಲ್ಲಿ ನರ್ಸರಿ ಓದುತ್ತಿರುವ ಇಬ್ಬರು ಮಕ್ಕಳ ಮೇಲೆ ಅದೇ ಶಾಲೆಯ ಗುಮಾಸ್ತ ಲೈಂಗಿಕ ದೌರ್ಜನ್ಯ ಎಸಗಿದ ಭೀಕರ ಘಟನೆ ನಡೆದಿದೆ. ಶಾಲೆಯ ಶೌಚಾಲಯದಲ್ಲಿ ಆರೋಪಿ, 3 ಮತ್ತು 4 ವರ್ಷದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೋಷಕರು ದೂರು ನೀಡಿದರೂ ಮೊದಲಿಗೆ ಸುಮ್ಮನಿದ್ದ ಪೊಲೀಸರು ಆ.15ರಂದು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಗುಮಾಸ್ತನನ್ನು ಬಂಧಿಸಲಾಗಿದೆ. ಆದರೆ ಈ ಸುದ್ದಿ ಮಂಗಳವಾರ ಒಬ್ಬರಿಂದ ಒಬ್ಬರಿಗೆ ಹಬ್ಬಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಶಾಲೆಗೆ ನುಗ್ಗಿದ ಪೋಷಕರು ಮತ್ತು ಸಾರ್ವಜನಿಕರು ಕಟ್ಟಡ ಧ್ವಂಸ ಮಾಡಿದ್ದಾರೆ. ಜೊತೆಗೆ ರೈಲು ತಡೆ ನಡೆಸಿದ್ದಾರೆ. ಹೀಗಾಗಿ ರೈಲು ಸಂಚಾರ ವ್ಯತ್ಯಯವಾಗಿದೆ.
ಈ ನಡುವೆ ಪೋಷಕರ ಆಕ್ರೋಶಕ್ಕೆ ಬೆಚ್ಚಿದ್ದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ಹಾಗೂ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿದೆ. ಘಟನೆ ಕುರಿತು ದೂರು ನೀಡಿದರೂ ಕ್ರಮ ಕೈಗೊಳ್ಳದ ಸ್ಥಳೀಯ ಪೊಲೀಸ್ ಠಾಣೆಯ ಮೂವರನ್ನು ಅಮಾನತು ಮಾಡಲಾಗಿದೆ ಇದೇ ವೇಳೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಏಕನಾಥ್ ಶಿಂಧೆ, ಪ್ರಕರಣದ ತನಿಖೆಗೆ S T I ರಚಿಸಲಾಗುವುದು. ತ್ವರಿತ ಕೋರ್ಟ್ ಸ್ಥಾಪಿಸಲಾಗುವುದು. ಆರೋಪಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ