Categories
ಅಪರಾಧ

ಎಂಡಿಎಂಎ ಮಾರಾಟ ಮಾಡುತ್ತಿದ್ದವನ ಸೆರೆ

ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ತಂದು ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಕುಖ್ಯಾತ ದನ ಕಳ್ಳನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 12.05 ಗ್ರಾಂ. ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಮೂಲತಃ ಕಸಬಾ ಬೆಂಗ್ರೆ, ಹಾಲಿ ಅಸೈಗೊಳಿ ನಿವಾಸಿ ಅಬ್ದುಲ್ ಕಬೀರ್ (36 ವರ್ಷ) ಬಂಧಿತ ಆರೋಪಿ.

ಈತ ಮಂಗಳೂರು ನಗರಕ್ಕೆ ಬೆಂಗಳೂರು ಹಾಗೂ ಮುಂಬೈಯಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎ ತರಿಸಿಕೊಂಡು ಅದನ್ನು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಸ್ವೀಪ್ಸ್ ಕಾರಿನಲ್ಲಿ ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ

ಈತನ ವಶದಿಂದ 1,20,000 ರು. ಮೌಲ್ಯದ 12.05 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್, ಬಿಳಿ ಬಣ್ಣದ ಸ್ವಿಫ್ಟ್ ಕಾರು ಸಹಿತ ಒಟ್ಟು 4,31,250 ರು. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ